ಬೆಂಗಳೂರು:ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೇ ಸಿಎಂ ಆಗಿರ್ತಾರೆ ಅನ್ನೋದು ನಿಜವಾಗುತ್ತೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ-ಡಿಕೆಶಿಯಿಂದ ಕಾಂಗ್ರೆಸ್ ಅಂತ್ಯ ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ದೇವೇಗೌಡರು ಯಾವಾಗೆಲ್ಲ ಭವಿಷ್ಯ ನುಡಿದಿದ್ದಾರೋ ಅದೆಲ್ಲ ನಿಜವಾಗಿದೆ. ದೇವೇಗೌಡರ ಭವಿಷ್ಯ ಸುಳ್ಳಾಗಿಲ್ಲ. ಖಂಡಿತವಾಗಿ ಅದು ಸತ್ಯ ಆಗಲಿದೆ, ಅಂಥ ದಿನಗಳು ಬಹಳ ದೂರ ಇಲ್ಲ ಎಂದರು.
ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಎಲ್ಲರೂ ರಾಷ್ಟ್ರೀಯ ಹಬ್ಬದ ರೀತಿ ಸಂಭ್ರಮ ಪಡುತ್ತಿದ್ದಾರೆ. ಕಾಂಗ್ರೆಸ್ನವರು ಇಲ್ಲ ಸಲ್ಲದ ಆರೋಪದಿಂದ ಅಪಶಕುನ ಮಾಡ್ತಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಸಹ ನಾನೂ ಶ್ರೀರಾಮನ ಭಕ್ತ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಶ್ರೀರಾಮೋತ್ಸವ ಆಚರಿಸೋದಾಗಿ ಸಂತೋಷ ಪಟ್ಟಿದ್ದಾರೆ ಎಂದು ಕಾರಜೋಳ ಹೇಳಿದ್ರು.
ಕಾಂಗ್ರೆಸ್ನವರಿಗೆ ಹೇಳ್ತೀನಿ, ರಾಮ ಅಂದ್ರೆ ಇಡೀ ಜಗತ್ತಿನ ಭಾವೈಕ್ಯತೆ ಸಂಕೇತ. ಕಾಂಗ್ರೆಸ್ನವರಿಗೆ ಮಾಡಲು ಏನೂ ಕೆಲಸ ಇಲ್ಲ. ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡ - ಸೋಮಣ್ಣ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಬಿಜೆಪಿ ಬಿಡಲ್ಲ. ಯಾರೂ ಆತಂಕ ಪಡುವ ಅಗತ್ಯ ಇಲ್ಲವೆಂದು ತಿಳಿಸಿದರು.
ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ: ಸಿದ್ದರಾಮಯ್ಯ
ನನ್ನ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಮತ್ತು ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಅಂತ ಸಿಎಂ ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು ಎಂದಿದ್ದಾರೆ.
ಯಾವ ರಾಜಕೀಯ ಪಕ್ಷ ಕೂಡ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ದೇವೇಗೌಡರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ಸಂಘ ದೋಷದ ಫಲ. ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ ದೇವೇಗೌಡರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡ ನಾನು ಬಯಸುತ್ತೇನೆ.
ಇದನ್ನೂಓದಿ:ಮೂವರು ಡಿಸಿಎಂ ನೇಮಕ ಗಾಳಿ ಸುದ್ದಿ, ಚರ್ಚೆ ನಡೆದಿಲ್ಲ: ಗೃಹ ಸಚಿವ ಪರಮೇಶ್ವರ್