ಬೆಂಗಳೂರು:ಇಂದು ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಏಕಕಾಲದಲ್ಲಿ ಪ್ರಭಾಕರ್ ರೆಡ್ಡಿಗೆ ಸಂಬಂಧಿಸಿದ ಮೂರು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರ ಮೈಲಸಂದ್ರದ ಮನೆ, ಕಚೇರಿ, ಕೋಣನಕುಂಟೆಯ ಅಪಾರ್ಟ್ಮೆಂಟ್ ಮೇಲೆ ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕಡತಗಳ ಪರಿಶೀಲನೆ ಕೈಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ:ಪ್ರತಿಪಕ್ಷದ ನಾಯಕರ ಮೇಲೆ ಇನ್ನೂ ಎರಡು ತಿಂಗಳುಗಳ ಕಾಲ ಐಟಿ ದಾಳಿ ಸಾಮಾನ್ಯ. ಇದು ಯಾಕೆ ಅಂತಲೂ ಎಲ್ಲರಿಗೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಇಂದು (ಬುಧವಾರ) ನಡೆದ ಐಟಿ ದಾಳಿ ವಿಚಾರ ಕುರಿತು ಹುಬ್ಬಳ್ಳಿ ತಾಲೂಕಿನ ಹೆಬಸೂರನಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಭಾಕರ್ ರೆಡ್ಡಿ ಒಬ್ಬ ಉದ್ಯಮಿ. ಇಂತಹ ಐಟಿ ದಾಳಿ ಸಾಮಾನ್ಯ. ಇನ್ನೂ ಎರಡಡ್ಮೂರು ತಿಂಗಳು ಇಂತಹ ಐಟಿ ದಾಳಿಗಳು ಪ್ರತಿಪಕ್ಷದ ನಾಯಕರ ಮೇಲೆ ನಡೆಯುತ್ತವೆ. ಇದು ಯಾಕೆ ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯಕತೆಯಿಲ್ಲ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚೆಯು ತೌಡು ಕುಟ್ಟುವ ಕೆಲಸವಾಗುತ್ತಿದೆ. ಚರ್ಚೆಯಿಂದ ಏನು ಸಾಧ್ಯಯಿಲ್ಲ. ಎಲ್ಲಾ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆ ಒದಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ. ಬಿಜೆಪಿಯವರು ಅವರ ಆತ್ಮಸಾಕ್ಷಿಗೆ ಉತ್ತರ ಕೊಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ. ಇದಕ್ಕೆ ದಾಖಲೆ ನೀಡಲ್ಲ. ನಾನು ಈ ಹಿಂದೆ ಭ್ರಷ್ಟಾಚಾರದ ಆರೋಪಗಳಿಗೆ ದಾಖಲೆ ನೀಡಿದ್ದೆ.