ಕರ್ನಾಟಕ

karnataka

ETV Bharat / state

ಸಂವಿಧಾನ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಲೇಖಕ ಪಿ.ಸಾಯಿನಾಥ್ - ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆ

ಬೆಂಗಳೂರು ನಗರದ ನ್ಯಾಷನಲ್ ಕಾಲೇಜಿನಲ್ಲಿ ಇಂದು ಪಿ.ಸಾಯಿನಾಥ್ ಅವರು ಬರೆದು ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿರುವ 'ಕೊನೆಯ ಹೀರೋಗಳು' ಕೃತಿ ಬಿಡುಗಡೆ ಸಮಾರಂಭ ನಡೆಯಿತು.

Last Hero's book release ceremony held.
ಜಿ ಎನ್ ಮೋಹನ್ ಕನ್ನಡಕ್ಕೆ ಅನುವಾದ ಮಾಡಿರುವ ಕೊನೆಯ ಹೀರೋಗಳು ಕೃತಿ ಬಿಡುಗಡೆ ಸಮಾರಂಭ ನಡೆಯಿತು.

By ETV Bharat Karnataka Team

Published : Oct 1, 2023, 9:45 PM IST

ಬೆಂಗಳೂರು:ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಯಿನಾಥ್ ಅಭಿಪ್ರಾಯಪಟ್ಟರು. ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದು ತುರ್ತು ಅಗತ್ಯ. ಕೇಂದ್ರ ಸರಕಾರವು ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿಯಾಗಿವೆ. ಸಮಾಜವನು ನಿಧಾನವಾಗಿ ಉಸಿರುಗಟ್ಟಿಸುತ್ತಿವೆ. ರೈತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯ ಉದ್ದೇಶ ತಮ್ಮ ಹಕ್ಕುಗಳನ್ನು ಮಾತ್ರವಾಗಿರಲಿಲ್ಲ, ಅದು ಪರೋಕ್ಷವಾಗಿ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಳವಳಿಯಾಗಿತ್ತು ಎಂದರು.

ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ಬಿಡುಗಡೆ ಸಿಕ್ಕಿಲ್ಲ ಎನ್ನುವುದು ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಅಳಲು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕೊನೆಗೊಂಡಾಗ, ಜಾತಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾದಾಗ ಸಂಪೂರ್ಣ ಬಿಡುಗಡೆ ಸಿಗುತ್ತದೆ ಎಂಬುದು ಅವರ ಅಭಿಪ್ರಾಯ. ಆದರೆ ಬಿಡುಗಡೆ ಎಂಬುದರ ವ್ಯಾಪ್ತಿ ತುಂಬಾ ಹಿರಿದು. ಇದನ್ನು ಪಡೆದುಕೊಳ್ಳಲು ನಾವೆಲ್ಲರೂ ಒಂದಾಗಬೇಕು. ಈ ಕಾರಣಕ್ಕಾಗಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಹಲ್ಲೆಗಳನ್ನು ತಡೆಗಟ್ಟಬೇಕು ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ವಾಸ್ತವವಾಗಿ ಅವರೇ ಸ್ವಾತಂತ್ರ್ಯದ ನಿಜ ಹೋರಾಟಗಾರ್ತಿಯರಾದರೂ, ಯಾವುದೇ ಪಟ್ಟಿಗೂ ಸೇರ್ಪಡೆಗೊಳಿಸದೇ ಅವರೆಲ್ಲರನ್ನೂ ಕಡೆಗಣಿಸಲಾಗಿದೆ. ಮನೆಗಳಲ್ಲಿ ಅಡುಗೆ ಮಾಡಿಕೊಂಡು, ಕುಟುಂಬವನ್ನು ನಿರ್ವಹಿಸುವ ಜತೆಗೆ ಕೃಷಿ ಕಾರ್ಯವನ್ನೂ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಮಹಿಳೆಯರು ಸಹಕರಿಸಿದ್ದಾರೆ. ಕೆಲವೊಮ್ಮೆ ಬಂದೂಕು ಹಿಡಿದುಕೊಂಡು, ಇಲ್ಲವೇ ಶಸ್ತ್ರಾಸ್ತ್ರಗಳ ಸಾಗಣೆಯಂತಹ ಕಾರ್ಯಗಳಲ್ಲೂ ನೆರವಾಗಿದ್ದಾರೆ. ಆದರೆ ಇವರು ಯಾರೂ ಗುಂಡು ಹಾರಿಸಿಲ್ಲ, ಜೈಲಿಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಶಾಹಿಯ ಕೆಂಪುಪಟ್ಟಿ ನಿಲುವು ಅವರು ಯಾರಿಗೂ ಸ್ವಾತಂತ್ರ್ಯ ಯೋಧರು ಎಂಬ ಸ್ಥಾನಮಾನ ಸಿಗದಂತೆ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆಗೊಳಿಸಿದ ಹಿರಿಯ ವಿದ್ವಾಂಸ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, 1990ರ ದಶಕದಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವ ಡಾ. ಮನಮೋಹನ್ ಸಿಂಗ್ ಮುಕ್ತ ನೀತಿ ಜಾರಿಗೊಳಿಸಿದರು. ಇದರ ಜತೆಗೆ ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆ ನಡೆಸಿದರು. ಈ ಎರಡೂ ಘಟನೆಗಳು ಇಡೀ ದೇಶವನ್ನು ಆಳವಾಗಿ ಘಾಸಿಗೊಳಿಸಿವೆ. ಈ ಗಾಯ ಮಾಸಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದರು.

1992ರಿಂದ 2017ರ ನಡುವೆ ರಾಷ್ಟ್ರದಾದ್ಯಂತ 17 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಬಡತನ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಚಕಾರವೆತ್ತದೆ ಈ ಯಾವುದೇ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಬಂಡವಾಳಶಾಹಿಗಳ ಪರವಾದ ನಿಲುವು ಪ್ರಕಟಪಡಿಸುತ್ತಾ ತಮ್ಮ ಜವಾಬ್ದಾರಿ ಮರೆಯುತ್ತಿವೆ. ಇದು ಜಾಗತೀಕರಣ ಕರಾಳತೆಗೆ ಹಿಡಿದ ಕೈಗನ್ನಡಿ ಎಂದರು.

1992ರ ನಂತರದಲ್ಲಿ ರಾಷ್ಟ್ರದಲ್ಲಿ ಬೌದ್ಧಿಕ ಸ್ಥಿತ್ಯಂತರಗಳು ಉಂಟಾಗಿವೆ. ಅದುವರೆಗೂ ಸಮಾಜವಾದ, ಸಮಾನತೆ ಎಂದು ಸಂವಿಧಾನಿಕ ಪರಿಭಾಷೆಯಲ್ಲಿ ಮಾತನಾಡುತ್ತಿದ್ದವರು ಮತೀಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಆದರೆ ಪಿ. ಸಾಯಿನಾಥ್ ಕೊನೆಯ ಹೀರೋಗಳು ಕೃತಿಯಲ್ಲಿರುವ 16 ಮಂದಿ ಸ್ವಾತಂತ್ರ್ಯ ಯೋಧರು ಎಂದಿಗೂ ಇಂಥ ಸ್ಥಿತ್ಯಂತರಕ್ಕೆ ಒಳಗಾಗಲಿಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ನಿಲುವುಗಳು, ತಾವು ರೂಢಿಸಿಕೊಂಡಿದ್ದ ಗಾಂಧಿವಾದದ ಅಂಶಗಳನ್ನು ಆಧರಿಸಿ ಜೀವನ ಸಾಗಿಸಿದರು ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಮಾತನಾಡಿ, ದಾಖಲೆಗಳಲ್ಲಿ ಇಲ್ಲದಿರುವ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ದನಿಯಾದದ್ದು ಸಾಯಿನಾಥ್ ಅವರ ವಿಶೇಷ. ಸ್ವಾತಂತ್ರ್ಯ ಹೋರಾಟದ ಈ ಕಾಲಾಳು ಯೋಧರಿಂದ ಸ್ಫೂರ್ತಿ ಪಡೆಯೋಣ ಎಂದರು.

ಅನುವಾದಕ ಜಿ.ಎನ್.ಮೋಹನ್, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರು, ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಎನ್.ಆರ್.ವಿಶುಕುಮಾರ್, ಸಂಸ್ಕೃತಿ ಚಿಂತಕರಾದ ಡಾ.ವಿಜಯಮ್ಮ, ಬಹುರೂಪಿಯ ಸಂಸ್ಥಾಪಕಿ ಶ್ರೀಜಾ ವಿ.ಎನ್.ಉಪಸ್ಥಿತರಿದ್ದರು.

ಇದನ್ನೂಓದಿ:'Elon Musk' ಜೀವನಚರಿತ್ರೆ ಪುಸ್ತಕ ಬಿಡುಗಡೆ; ಮಸ್ಕ್​ ಜೀವನದ ರೋಚಕ ಸಂಗತಿಗಳು ಬಹಿರಂಗ!

ABOUT THE AUTHOR

...view details