ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದಲೂ ಶಿಫಾರಸು ಹೋಗಬೇಕು :ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಮಾತನಾಡಿ, ಸಮುದಾಯದ ಪ್ರಮುಖ ಮುಖಂಡರೇ ಎಲ್ಲರೂ ಸೇರಿ ಎಲ್ಲೆಡೆ ಹೋರಾಟ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂಬ ಬೇಡಿಕೆ ಬಹು ದಿನಗಳಿಂದಲೂ ಇತ್ತು. ಇಂದು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಈ ಒಂದು ಶಿಫಾರಸು ಹೋಗಬೇಕು. ಕಳೆದ ಮೂರು ದಶಕಗಳಿಂದಲೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಈ ಮೀಸಲಾತಿಯಿಂದ ವಂಚಿತರಾಗಿ ನಮ್ಮ ಸಮುದಾಯದ ಯುವಕ-ಯುವತಿಯರು ಹಲವು ಕ್ಷೇತ್ರಗಳಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ನಮ್ಮ ಸಮುದಾಯದ ಮಠಮಾನ್ಯಗಳ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಕೆಲವರಿಗೆ ಮಾತ್ರ ಅನುಕೂಲ:ಪ್ರಸ್ತುತ ರಾಜ್ಯದಲ್ಲಿ ಲಿಂಗಾಯತ ವೀರಶೈವರಿಗೆ ಕ್ಯಾಟಗರಿ 3ಬಿ ನಲ್ಲಿ ಶೇ. ಐದರಷ್ಟು ಮೀಸಲಾತಿ ಇದೆ. ರಾಜ್ಯದಲ್ಲಿ ಇರುವ ಮೀಸಲಾತಿ ಪಟ್ಟಿ ಕೇಂದ್ರದಲ್ಲಿ ಇಲ್ಲ. ವೀರಶೈವ ಲಿಂಗಾಯತ ಸಮುದಾಯದ ಒಂದೆರಡು ಪಂಗಡಗಳಿಗೆ ಮಾತ್ರ ಮೀಸಲಾತಿಯ ಅನುಕೂಲ ಸಿಗುತ್ತಿದೆ. ಉಳಿದಂತೆ ಶೇಕಡ 80 ರಷ್ಟು ಒಳಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಿಂದ ಇಂದು ವಂಚಿತವಾಗಿವೆ. ಕೇಂದ್ರದ ಹಲವು ನೇಮಕಾತಿಗಳಲ್ಲಿ ನಮಗೆ ಅನ್ಯಾಯ ಆಗುತ್ತಿದೆ ಎಂದು ದೂರಿದರು.