ಬೆಂಗಳೂರು:ಐದು ವರ್ಷ ರಾಜ್ಯವನ್ನು ಆಳಿದ ಹಿರಿಯ ರಾಜಕಾರಣಿ,ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಒಂದು ಸೀಟು ಹುಡುಕಲು ಅಲೆಮಾರಿಯ ರೀತಿ ಓಡಾಡುತ್ತಿದ್ದಾರೆ. ಈಗ ಅವರು, ಕೋಲಾರದಲ್ಲೂ ಸೋತು ಮನೆಗೆ ಹೋಗುತ್ತಾರೆ. 2024ರ ಚುನಾವಣೆ ನಂತರ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರೂ ಇರಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಸಿಎಂ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರ ಜೊತೆ ಉಪಹಾರ ಕೂಟದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಿಂದ ವರುಣಾಗೆ ಹೋಗಿ ಅಲ್ಲಿಂದ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಅಲ್ಲಿ ಸೋಲಿನ ಭಯ ಇದ್ದ ಕಾರಣಕ್ಕೆ ಬಾದಾಮಿಯನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದರು. ಚಾಮುಂಡೇಶ್ವರಿ ಜನ ಕೈಬಿಟ್ಟರೂ ಬಾದಾಮಿ ಜನ ಸಿದ್ದರಾಮಯ್ಯ ಅವರ ಕೈಹಿಡಿದಿದ್ದರು. ಆದರೂ ಈ ಬಾರಿ ಬಾದಾಮಿ ಜನರ ಮೇಲೆ ಸಿದ್ದರಾಮಯ್ಯಗೆ ವಿಶ್ವಾಸವಿಲ್ಲ, ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ಅವರು ಹುಟ್ಟಿ ಬೆಳೆದ ಚಾಮುಂಡೇಶ್ವರಿ, ಕೈಹಿಡಿದಿದ್ದ ಬಾದಾಮಿ ಬಿಟ್ಟು ಈ ಬಾರಿ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಕೋಲಾರನೂ ಸೇಫ್ ಅಲ್ಲ. ಅಲ್ಲಿಯೂ ಸೋತು ಮನೆಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.
40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ: ಬೆಳಗಾವಿಯಿಂದ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸುತ್ತಿದ್ದಾರೆ. ಕಾಂಗ್ರೆಸ್ನವರು ಸುಮ್ಮನೇ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಸ್ವಂತ ಜಿಲ್ಲೆಯಲ್ಲೇ ಸೋತು ಓಡಿ ಬಂದಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮೈಸೂರಿನಲ್ಲಿ ಹುಟ್ಟಿ ಬೆಳೆದವರು ಅಲ್ಲಿಂದ ಬಾದಾಮಿಗೆ ಬಂದು ಕೊನೆಗೆ ಅಲ್ಲಿ ಸೋಲುತ್ತೇನೆ ಎಂದು ಅಲ್ಲಿಂದ ಪಲಾಯನ ಮಾಡಿದ್ದಾರೆ. ಅವರಿಗೆ ರಕ್ಷಣೆ ಇಲ್ಲ, ಇನ್ನೂ ಅವರ ಕಾರ್ಯಕರ್ತರಿಗೆ ಎಲ್ಲಿದೆ ರಕ್ಷಣೆ..?. ಅವರು ಇವತ್ತೇ ಬರೆದಿಟ್ಟುಕೊಳ್ಳಲಿ, ಅವರು 40 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ ಎಂದು ಅಭಿಪ್ರಾಯಪಟ್ಟರು.