ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣದ ಆರೋಪದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿಯೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿ ಎಂದ ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಸಂಸದೀಯ ಮಂಡಳಿ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾರನ್ನು ಯಾರು ಬೇಕಾದರೂ ತನಿಖೆ ಮಾಡಲಿ. ನನಗೇನೂ ಸಂಬಂಧ ಎಂದು ಗರಂ ಆದರು.
ಈ ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾರನ್ನು ಬೇಕಾದರೂ ತನಿಖೆ ಮಾಡಬಹುದು. ನನ್ನ ಅವಧಿಯಲ್ಲದೇ ಬೇರೆಯವರದ್ದೂ ತನಿಖೆ ಮಾಡಲಿ ಎಂದಿದ್ದಾರೆ. ಅಲ್ಲದೇ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿಯೆ ಎಂದಿದ್ದಾರೆ.
ಇದೇ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಸಿಬಿಐ ಅವರ ಕೆಲಸ ಅವರು ಮಾಡುತ್ತಾರೆ. ನಾನೇನು ಹೇಳಲಿ, ಯಾರನ್ನ ವಿಚಾರಣೆ ಮಾಡ್ತಾರೋ ಮಾಡಲಿ ಎಂದಿದ್ದಾರೆ.