ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದ ಐವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಉಗ್ರರ ಬಂಧನ ಪ್ರಕರಣ ಸಿಸಿಬಿಯಿಂದ ವರ್ಗಾವಣೆಗೊಂಡ ಬೆನ್ನಲ್ಲೇ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಪ್ರಕರಣ ದಾಖಲಿಸಿಕೊಂಡಿದೆ. ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಶಂಕಿತ ಉಗ್ರರಾದ ಆರ್.ಟಿ ನಗರದ ಸುಲ್ತಾನ್‌ಪಾಳ್ಯ ನಿವಾಸಿ ಸೈಯದ್ ಸುಹೈಲ್ ಖಾನ್ (24), ಕೊಡಿಗೇಹಳ್ಳಿ ನಿವಾಸಿ ಮೊಹಮ್ಮದ್ ಉಮರ್ (29), ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್ (25), ಸೈಯ್ಯದ್ ಮುದಾಸಿರ್ ಪಾಷಾ (28) ಹಾಗೂ ಮೊಹಮ್ಮದ್ ಫೈಸಲ್ (30) ನನ್ನ ಎನ್‌ಐಎ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯಾಗಿರುವ ಆರ್.ಟಿ.ನಗರ ನಿವಾಸಿ ಜುನೇದ್ ಅಹಮ್ಮದ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ)ಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಮತ್ತೊಂದೆಡೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಎಲ್‌ಇಟಿ ಸಂಘಟನೆಯ ಅಬ್ದುಲ್ ನಾಸಿರ್ ಮದನಿಯ ಆಪ್ತ ಕೇರಳ ಮೂಲದ ಟಿ.ನಜೀರ್ ವಿರುದ್ಧವೂ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿದೆ. ಜೈಲಿನಲ್ಲಿದ್ದಕೊಂಡೇ ಟಿ.ನಜೀರ್ ಐವರು ಶಂಕಿತ ಉಗ್ರರಿಗೂ ತರಬೇತಿ ನೀಡಿರುವುದು ತನಿಖೆ ವೇಳೆ ಬಹಿರಂಗವಾಗಿತ್ತು. ಬಂಧಿತರ ಬಳಿ ಜೀವಂತ ಗ್ರೇನೈಡ್ ಪತ್ತೆಯಾಗಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್, ಅಪರಿಚಿತ ವ್ಯಕ್ತಿಯೊಬ್ಬನಿಂದ ಡೆಲಿವರಿ ಮೂಲಕ ಈ ಜೀವಂತ ಗ್ರೇನೈಡ್‌ನ್ನು ತಬ್ರೇಜ್ ಮನೆಗೆ ತಲುಪಿಸಿದ್ದ. ಜುನೈದ್ ವಿದೇಶದಲ್ಲಿದ್ದುಕೊಂಡು ನೀಡಿರುವ ಸೂಚನೆಯಂತೆ ಆರೋಪಿ ತಬ್ರೇಜ್, ಅಪರಿಚಿತನಿಂದ 4 ಜೀವಂತ ಗ್ರೆನೈಡ್‌ಗಳಿರುವ ಪಾರ್ಸೆಲ್ ಸ್ವೀಕರಿಸಿದ್ದ. ಇದನ್ನ ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದಂತೆ ತಬ್ರೆಜ್ ಮನೆಯ ಕೊಠಡಿಯ ಅಲ್ಮೇರಾದ ಲಾಕರ್ನಲ್ಲಿ ಜಾಗ್ರತೆಯಾಗಿ ಜೀವಂತ ಗ್ರೆನೈಡ್ಗಳನ್ನು ಇಟ್ಟು ಲಾಕ್ ಮಾಡಿಕೊಂಡಿದ್ದ.