ಕರ್ನಾಟಕ

karnataka

ETV Bharat / state

ಪಿಯು ಉಪನ್ಯಾಸಕರ ನೇಮಕಾತಿ: ಅನ್ಯಾಯ ನಡೆಯುತ್ತಿದ್ದರೂ ಸುಮ್ಮನಿದ್ದಾರಾ ಶಿಕ್ಷಣ ಸಚಿವರು?

2015ರ ಮೇ 8ರಂದು 1,203 ಪಿಯು ಉಪನ್ಯಾಸಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅರ್ಜಿ ಆಹ್ವಾನಿಸಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆ ನಡೆದಿರಲಿಲ್ಲ. ನಂತರ 2018ರ ನವೆಂಬರ್ ನಲ್ಲಿ ಪರೀಕ್ಷೆ ನಡೆಸಿದ್ದ ಕೆಇಎ ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಮೀಸಲು ನಿಗದಿ ಅನುಸಾರ ಅಂತಿಮ ಪಟ್ಟಿ ಸಿದ್ದಪಡಿಸಿ ಪಿಯು ಮಂಡಳಿಗೆ ಸಲ್ಲಿಸಿದೆ.

By

Published : Sep 15, 2020, 10:29 PM IST

PU Board
ಪಿಯು ಮಂಡಳಿ

ಬೆಂಗಳೂರು: ಕಳೆದ 5 ವರ್ಷಗಳಿಂದ ಬಾಕಿ ಉಳಿದಿರುವ 1,203 ಪಿಯು ಉಪನ್ಯಾಸಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ಇದೀಗ ಅಂತಿಮಗೊಳಿಸಿಲು ಮುಂದಾಗಿದೆ. ಇದೇ ವೇಳೆ ನೇಮಕಾತಿಯಲ್ಲಿ 98 ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಆರೋಪ ಕೇಳಿ ಬಂದಿದ್ದರೂ, ಶಿಕ್ಷಣ ಸಚಿವರು ಮೌನ ವಹಿಸಿರುವುದು ಹುದ್ದೆ ವಂಚಿತ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

2015ರ ಮೇ 8ರಂದು 1203 ಪಿಯು ಉಪನ್ಯಾಸಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅರ್ಜಿ ಆಹ್ವಾನಿಸಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆ ನಡೆದಿರಲಿಲ್ಲ. ನಂತರ 2018ರ ನವೆಂಬರ್ ನಲ್ಲಿ ಪರೀಕ್ಷೆ ನಡೆಸಿದ್ದ ಕೆಇಎ ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಮೀಸಲು ನಿಗದಿ ಅನುಸಾರ ಅಂತಿಮ ಪಟ್ಟಿ ಸಿದ್ದಪಡಿಸಿ ಪಿಯು ಮಂಡಳಿಗೆ ಸಲ್ಲಿಸಿದೆ. ಪಟ್ಟಿ ಆಧರಿಸಿ ಕೌನ್ಸೆಲಿಂಗ್ ನಡೆಸಿರುವ ಪಿಯು ಮಂಡಳಿ ಇದೀಗ ಅಭ್ಯರ್ಥಿಗಳಿಗೆ ಹುದ್ದೆ ಸೂಚಿಸಿದ್ದು, ನೇಮಕಾತಿ ಆದೇಶದ ಪತ್ರ ನೀಡುವ ಸಿದ್ದತೆಯಲ್ಲಿದೆ. ಹೀಗೆ, ಪಿಯು ಮಂಡಳಿ ನೇಮಕಾತಿ ಆದೇಶ ನೀಡಲು ಮುಂದಾಗಿರುವ ಕ್ರಮ 98 ಅಭ್ಯರ್ಥಿಗಳಿಗೆ ಸಂಕಷ್ಟ ತಂದಿಟ್ಟಿದೆ.

ಆಯ್ಕೆ ಪಟ್ಟಿ

ವಿವಾದವೇನು :ಪಿಯು ಉಪನ್ಯಾಸಕರ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದ ಕೆಇಎ, ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಮೀಸಲು ಆಧರಿಸಿ ಪಟ್ಟಿ ಸಿದ್ದಪಡಿಸಿದೆ. ಆದರೆ, ಈ ಪಟ್ಟಿ ಸಿದ್ದಪಡಿಸುವ ಸಂದರ್ಭದಲ್ಲಿ ಮೀಸಲು ನಿಗದಿ ವಿಚಾರದಲ್ಲಿ ಲೋಪ ಎಸಗಿರುವ ಆರೋಪವಿದೆ. ಸಂವಿಧಾನದ ವಿಧಿ 371(ಜೆ)(3) ಅಡಿ ಲಭ್ಯವಿರುವ ಮೀಸಲು ಸವಲತ್ತುಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2013ರಲ್ಲಿ ರೂಪಿಸಿರುವ ನಿಯಮಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲು ನಿಗದಿ ಮಾಡಲಾಗಿದೆ.

ಈ ನಿಯಮಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಅಭ್ಯರ್ಥಿಗಳಿಗೆ, ರಾಜ್ಯ ವ್ಯಾಪಿ ಸ್ಥಳೀಯ ವೃಂದದಲ್ಲಿ ಶೇ 75 ರಷ್ಟು ಹಾಗೂ ಮೂಲ ವೃಂದದಲ್ಲಿ ಶೇ 8 ರಷ್ಟು ಹುದ್ದೆಗಳನ್ನು ನೀಡಬೇಕಿತ್ತು. ಆದರೆ, ಈ ಲೆಕ್ಕಾಚಾರದಲ್ಲಿ ಲೋಪ ಎಸಗಿರುವ ಕೆಇಎ ಮೂಲ ವೃಂದದಲ್ಲಿ ಹಾಗೂ ಸ್ಥಳೀಯ ವೃಂದದಲ್ಲಿಯೂ ಹೈ.ಕ ಅಭ್ಯರ್ಥಿಗಳಿಗೆ ಹೆಚ್ಚುವರಿ ಹುದ್ದೆ ನೀಡಿದೆ. ಇದಕ್ಕೆ ಉಹಾದರಣೆ ಎಂಬಂತೆ ಅರ್ಥ ಶಾಸ್ತ್ರ ವಿಭಾಗಕ್ಕೆ ನಡೆದ ಆಯ್ಕೆಯಲ್ಲಿ ಮೂಲ ವೃಂದಕ್ಕೆ ನಿಗದಿಯಾಗಿದ್ದ ಶೇ 25 ರಷ್ಟು ಹುದ್ದೆಗಳಲ್ಲಿಯೂ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲು ನೀಡಿದೆ(ದಾಖಲೆ ಇದೆ) . ಈ ರೀತಿ ಮೂಲ ವೃಂದಕ್ಕೆ ಸಿಗಬೇಕಿದ್ದ ಹುದ್ದೆಗಳ ಪೈಕಿ ಒಟ್ಟು 98 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೀಡಲಾಗಿದೆ. ಇದರಿಂದಾಗಿ ಅರ್ಹರಿಗೆ ವಂಚನೆಯಾಗಿದೆ ಎಂಬುದು ಅಭ್ಯರ್ಥಿಗಳ ಆರೋಪ.

ನೇಮಕಾತಿಗೆ ತಡೆ ನೀಡಿತ್ತು ಹೈಕೋರ್ಟ್ :ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಲ ಅವಕಾಶ ವಂಚಿತ ಅಭ್ಯರ್ಥಿಗಳು ಮೀಸಲು ನಿಗದಿಯನ್ನು ಸರಿಪಡಿಸಲು ಕೋರಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ(ಕೆಎಟಿ)ಗೆ ದೂರು ನೀಡಿದ್ದರು. 2019ರ ನವೆಂಬರ್ ನಲ್ಲಿ ಕೆಎಟಿ ಅರ್ಜಿ ಅನೂರ್ಜಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ 2019ರ ಡಿಸೆಂಬರ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ನೇಮಕಾತಿಗೆ ತಡೆ ನೀಡಿತ್ತು. ಬಳಿಕ ರಾಜ್ಯ ಸರ್ಕಾರದ ಮನವಿ ಮೇರೆಗೆ ತಡೆ ತೆರವು ಮಾಡಿದ್ದ ಪೀಠ, ನೇಮಕಾತಿ ಪ್ರಕ್ರಿಯೆ ನಡೆಸಬಹುದು. ಆದರೆ, ಅರ್ಜಿಯ ಅಂತಿಮ ತೀರ್ಪಿಗೆ ನೇಮಕಾತಿ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದ ಅನುಸಾರ ಆಯ್ಕೆ ಪೂರ್ಣಗೊಳಿಸಿದ್ದರೂ, ನೇಮಕಾತಿ ಆದೇಶ ನೀಡುವಂತಿಲ್ಲ. ಇತ್ತೀಚೆಗೆ ಅಭ್ಯರ್ಥಿಗಳು ಸಲ್ಲಿಸಿರುವ ಮಧ್ಯಂತರ ಮನವಿ ಪರಿಗಣಿಸಿರುವ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಅರ್ಜಿಯ ಅಂತಿಮ ಆದೇಶಕ್ಕೆ ನೇಮಕಾತಿ ಪ್ರಕ್ರಿಯೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಇದರ ನಡುವೆಯೂ ಸರ್ಕಾರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಅಭ್ಯರ್ಥಿಗಳಿಗೆ ಹುದ್ದೆ ಸೂಚಿಸಿದೆ.

ರಾಜಕೀಯ ಒತ್ತಡ?:ಅಭ್ಯರ್ಥಿಗಳು ಆರೋಪಿಸುವಂತೆ ನೇಮಕ ಪ್ರಕ್ರಿಯೆಯಲ್ಲಿ ರಾಜಕೀಯ ನಾಯಕರುಗಳ ಹಿತಾಸಕ್ತಿ ಇದೆ. ಅವರಿಗೆ ಬೇಕಾದ ಅಭ್ಯರ್ಥಿಗಳಿಗೆ ಹುದ್ದೆ ಸಿಗುವಂತೆ ನೋಡಿಕೊಳ್ಳಲು ಶಿಕ್ಷಣ ಸಚಿವರ ಮೇಲೆ ಒತ್ತಡ ತರುತ್ತಿದ್ದಾರೆ ಎಂಬ ಮಾತಿದೆ. ಕೆಲ ಅಭ್ಯರ್ಥಿಗಳಂತೂ ತಮ್ಮ ಆಯ್ಕೆ ಸಿಂಧುಗೊಳಿಸಿಕೊಳ್ಳಲು ಸಚಿವ ಸುರೇಶ್ ಕುಮಾರ್ ಅವರನ್ನು ನೇರವಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಒತ್ತಡಕ್ಕೆ ಸಿಲುಕಿರುವ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅರ್ಹರಿಗೆ ಅನ್ಯಾಯವಾಗುತ್ತಿದ್ದರೂ ನಿರ್ಲಿಪ್ತವಾಗಿದ್ದಾರೆ ಎಂಬುದು ಅಭ್ಯರ್ಥಿಗಳ ಆರೋಪ.

ಸದ್ಯ ಪ್ರಕರಣ ಹೈಕೋರ್ಟ್ ನಲ್ಲಿದ್ದು, ಅರ್ಜಿಯ ಅಂತಿಮ ತೀರ್ಪಿಗೆ ನೇಮಕಾತಿ ಒಳಪಟ್ಟಿರಲಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಸರ್ಕಾರ ಹಾಗೂ ಪಿಯು ಮಂಡಳಿ ನ್ಯಾಯಾಲಯದ ಆದೇಶ ಬರುವವರೆಗೂ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬಾರದು ಎಂಬುದು ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳ ಆಗ್ರಹ.

ABOUT THE AUTHOR

...view details