ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿ. ಮನೆ ಯಜಮಾನಿಗೆ ಮಾಸಿಕ 2,000ರೂ. ನೀಡುವ ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಿದೆ. ಗೃಹಲಕ್ಷ್ಮಿ ಯೋಜನೆಯಿಂದ ಇಲಾಖೆಯ ಇತರ ಪ್ರಮುಖ ಯೋಜನೆಗಳ ಸ್ಥಿತಿಗತಿ ಏನಿದೆ ಎಂಬುದರ ಮಾಹಿತಿ ಇಲ್ಲಿದೆ.
ಪ್ರಸಕ್ತ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 17,500 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬಹುಪಾಲು ಅನುದಾನ ಹಂಚಿಕೆಯಾಗಿರುವುದು ಗೃಹಲಕ್ಷ್ಮಿ ಯೋಜನೆಗಾಗಿದೆ. ಆಗಸ್ಟ್ ತಿಂಗಳಿಂದ ಈ ಯೋಜನೆ ಜಾರಿಯಾಗಿದ್ದು, ಸುಮಾರು 1.28 ಕೋಟಿ ಯಜಮಾನಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅಕ್ಟೋಬರ್ ತಿಂಗಳವರೆಗೆ ಗೃಹಲಕ್ಷ್ಮಿ ಯೋಜನೆಗಾಗಿ 5,700.91 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗಾಗಿ ಅಕ್ಟೋಬರ್ವರೆಗೆ ಆಗಿರುವ ವೆಚ್ಚ 3,883 ಕೋಟಿ ರೂ. ಇತ್ತ SCSPTSPಯಿಂದ ಯೋಜನೆಗೆ ಈವರೆಗೆ ಒಟ್ಟು 1,478 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಏನಿದೆ?:2023-24 ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 24,165.71 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ 17,500 ಕೋಟಿ ರೂ. ಗೃಹಲಕ್ಷ್ಮಿ ಯೋಜನೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಅಂದರೆ ಒಟ್ಟು ಇಲಾಖೆಗೆ ನೀಡಲಾದ ಅನುದಾನ ಪೈಕಿ 72% ಅನುದಾನ ಗೃಹಲಕ್ಷ್ಮಿಗೆ ಸಲ್ಲುತ್ತದೆ.
ಕೆಡಿಪಿ ಪ್ರಗತಿ ಅಂಕಿ ಅಂಶದ ಪ್ರಕಾರ ಅಕ್ಟೋಬರ್ವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಒಟ್ಟು 8,709.22 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲಾಖೆಯಲ್ಲಿ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಸುಮಾರು 6,383.94 ಕೋಟಿ ರೂ. ವೆಚ್ಚವಾಗಿದೆ. ಅಂದರೆ ಒಟ್ಟು ಹಂಚಿಕೆ ಎದುರು 24.76% ಆರ್ಥಿಕ ಪ್ರಗತಿ ಸಾಧಿಸಿದೆ.
ಕಳೆದ ವರ್ಷ ಅಕ್ಟೋಬರ್ ವೇಳೆಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ಹಂಚಿಕೆಯಾದ ಅನುದಾನದ ಪ್ರತಿಯಾಗಿ ಆದ ವೆಚ್ಚದಂತೆ ಸಾಧಿಸಿದ ಆರ್ಥಿಕ ಪ್ರಗತಿ ಕೇವಲ 5.34%. ಆದರೆ ಈ ಬಾರಿ ಸುಮಾರು 24.76% ಆರ್ಥಿಕ ಪ್ರಗತಿ ಸಾಧಿಸಿದೆ. ಈ ಬಾರಿ ಇಲಾಖೆಗೆ ಹಂಚಿಕೆಯಾಗಿರುವ ಒಟ್ಟು ಅನುದಾನ ಪೈಕಿ ಅಕ್ಟೋಬರ್ವರೆಗೆ ಸುಮಾರು 36.03% ಅನುದಾನ ಬಿಡುಗಡೆಯಾಗಿದೆ. ಆದರೆ ಕಳೆದ ಬಾರಿ ಇಲಾಖೆಯಲ್ಲಿ ಅಕ್ಟೋಬರ್ ವೇಳೆಗೆ ಒಟ್ಟು 37.43% ಅನುದಾನ ಬಿಡುಗಡೆಯಾಗಿತ್ತು.
ಇಲಾಖೆಯ ಬಹುಪಾಲು ಗೃಹಲಕ್ಷ್ಮಿಗೆ ಬಿಡುಗಡೆ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಂಚಿಕೆಯಾದ ಒಟ್ಟು 24,165.71 ಕೋಟಿ ರೂ. ಪೈಕಿ 72.41% ಗೃಹ ಲಕ್ಷ್ಮಿ ಪಾಲು ಆಗಿದೆ. ಈ ಬಾರಿ ಒಟ್ಟು ಇಲಾಖೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಗೃಹ ಲಕ್ಷ್ಮಿಯದ್ದೇ ಬಹುಪಾಲು ಹೊಂದಿದೆ. ಇಲಾಖೆಯಲ್ಲಿ ಅಕ್ಟೋಬರ್ ವರೆಗೆ ಒಟ್ಟು 8,709.22 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಗೃಹ ಲಕ್ಷ್ಮಿಗೆ ಅಕ್ಟೋಬರ್ ವರೆಗೆ 5,700.91 ಕೋಟಿ ರೂ. ಬಿಡುಗಡೆಯಾಗಿದೆ. ಅಂದರೆ ಇಲಾಖೆಯ ಒಟ್ಟು ಅನುದಾನ ಬಿಡುಗಡೆಯಲ್ಲಿ 65%ರಷ್ಟು ಅನುದಾನ ಗೃಹಲಕ್ಷ್ಮಿ ಯೋಜನೆಯ ಪಾಲಾಗಿದೆ.
ಕಳೆದ ವರ್ಷ ಇಲಾಖೆಗೆ ಹಂಚಿಕೆಯಾದ ಒಟ್ಟು ಅನುದಾನ 5,795.04 ಕೋಟಿ ರೂ. ಆ ಪೈಕಿ ಕಳೆದ ವರ್ಷ ಅಕ್ಟೋಬರ್ ವರೆಗೆ ಬಿಡುಗಡೆಯಾಗಿದ್ದು 2,169.42 ಕೋಟಿ ರೂ. ಅಂದರೆ ಕಳೆದ ಬಾರಿ ಒಟ್ಟು 37.43% ಅನುದಾನ ಬಿಡುಗಡೆಯಾಗಿತ್ತು. ಕೆಡಿಪಿ ಪ್ರಗತಿ ಅಂಕಿಅಂಶದಂತೆ ಈ ವರ್ಷ ಗೃಹ ಲಕ್ಷ್ಮಿ ಯೋಜನೆ ಹೊರತುಪಡಿಸಿ ಇಲಾಖೆಯ ಇತರ ಯೋಜನೆಗಳಿಗೆ ಒಟ್ಟು 6,665.71 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಇತರೆ ಯೋಜನೆಗಳಿಗೆ ಅಕ್ಟೋಬರ್ ವರೆಗೆ 3008.31 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಅಂದರೆ ಇತರೆ ಯೋಜನೆಗಳಿಗೆ ಈ ಬಾರಿ ಒಟ್ಟು 45.13%ದಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ.
ಇತರ ಯೋಜನೆಗೆ ಎಷ್ಟು ಹಣ ಬಿಡುಗಡೆ?:
ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ ಯೋಜನೆ:
- ಹಣ ಹಂಚಿಕೆ- 378.11 ಕೋಟಿ ರೂ.
- ಹಣ ಬಿಡುಗಡೆ- 47.06 ಕೋಟಿ ರೂ.
ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿ ವೇತನ:
- ಅನುದಾನ ಹಂಚಿಕೆ- 1705.75 ಕೋಟಿ ರೂ.
- ಅನುದಾನ ಬಿಡುಗಡೆ- 1133.53 ಕೋಟಿ ರೂ.
ಕ್ಷೀರ ಭಾಗ್ಯ, ಸೃಷ್ಟಿ, ಮಾತೃಪೂರ್ಣ: - ಅನುದಾನ ಹಂಚಿಕೆ- 833 ಕೋಟಿ ರೂ.
- ಅನುದಾನ ಬಿಡುಗಡೆ- 553.85 ಕೋಟಿ ರೂ.
ವಾತ್ಸಲ್ಯ ಅಭಿಯಾನದ ರಾಜ್ಯದ ಪಾಲು: - ಅನುದಾನ ಹಂಚಿಕೆ- 39.79 ಕೋಟಿ ರೂ.
- ಅನುದಾನ ಬಿಡುಗಡೆ- 10.51 ಕೋಟಿ ರೂ.
ಭಾಗ್ಯ ಲಕ್ಷ್ಮಿ ಯೋಜನೆ: - ಅನುದಾನ ಹಂಚಿಕೆ- 180 ಕೋಟಿ ರೂ.
- ಅನುದಾನ ಬಿಡುಗಡೆ- 112.50 ಕೋಟಿ ರೂ.
ಮಹಿಳೆಯರಿಗೆ ಬಡ್ಡಿ ಸಹಾಯಧನ: - ಅನುದಾನ ಹಂಚಿಕೆ- 52 ಕೋಟಿ ರೂ.
- ಅನುದಾನ ಬಿಡುಗಡೆ- 26 ಕೋಟಿ ರೂ.
ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ ರಾಜ್ಯದ ಪಾಲು: - ಅನುದಾನ ಹಂಚಿಕೆ- 974.99 ಕೋಟಿ ರೂ.
- ಅನುದಾನ ಬಿಡುಗಡೆ- 2.58 ಕೋಟಿ ರೂ.
ಅಂಗನವಾಡಿ ಕಟ್ಟಡ (ನಗರ): - ಅನುದಾನ ಹಂಚಿಕೆ- 35 ಕೋಟಿ ರೂ.
- ಅನುದಾನ ಬಿಡುಗಡೆ- 0 ರೂ.
ಅಂಗನವಾಡಿ ಕಟ್ಟಡ ನಿರ್ಮಾಣ: - ಅನುದಾನ ಹಂಚಿಕೆ- 80 ಕೋಟಿ ರೂ.
- ಅನುದಾನ ಬಿಡುಗಡೆ- 0
ಮಾತೃ ವಂದನಾ ಯೋಜನೆ: - ಅನುದಾನ ಹಂಚಿಕೆ- 107.32 ಕೋಟಿ ರೂ.
- ಅನುದಾನ ಬಿಡುಗಡೆ- 0
ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ: ಇನ್ನು ಮುಂದೆ ನಾಡದೇವತೆ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮೆ