ಬೆಂಗಳೂರು: ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಆ.15 ಸೋಮವಾರ (ನಾಳೆ) ನಡೆಯಲಿರುವ 'ಸ್ವಾತಂತ್ರ್ಯ ನಡಿಗೆ' ಯಲ್ಲಿ ಭಾಗವಹಿಸುವ ಹೊರ ಜಿಲ್ಲೆಗಳ ಜನರ ಅನುಕೂಲಕ್ಕೆ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ಹೊರ ವಲಯದಲ್ಲಿ ವಾಹನ ನಿಲುಗಡೆ ಹಾಗೂ ಮೆಟ್ರೋ ರೈಲು ಸಂಚಾರ ವ್ಯವಸ್ಥೆ ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರು ಹೊರಡಿಸಿರುವ ಪ್ರಕಟಣೆಯಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.
1. ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸುವ ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ವಿಜಯಪುರ, ರಾಯಚೂರು, ವಿಜಯನಗರ (ಹೊಸಪೇಟೆ), ಶಿವಮೊಗ್ಗ ಜಿಲ್ಲೆಗಳ ಜನರು ಅಂತಾರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಬಳಿ ವಾಹನ ನಿಲುಗಡೆ ಮಾಡಿ ನಾಗಸಂದ್ರ ಮೆಟ್ರೋ ಸ್ಟೇಷನ್ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
2. ಮೈಸೂರು ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸುವ ರಾಮನಗರ (ಕನಕಪುರ ಹೊರತುಪಡಿಸಿ), ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಬಳಿ ವಾಹನ ನಿಲುಗಡೆ ಮಾಡಿ ಮೆಟ್ರೋ ಸ್ಟೇಷನ್ನಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ವ್ಯವಸ್ಥೆ ಒದಗಿಸಲಾಗಿದೆ.
3. ಕನಕಪುರ ರಸ್ತೆ ಮಾರ್ಗವಾಗಿ ಬೆಂಗಳೂರು ಪ್ರವೇಶಿಸುವ ಕನಕಪುರ, ಮಳವಳ್ಳಿ, ಹನೂರು, ಕೊಳ್ಳೇಗಾಲ ಭಾಗದ ಜನರಿಗೆ ಕನಕಪುರ ರಸ್ತೆ ನೈಸ್ ಜಕ್ಷನ್ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಕೊಣನಕುಂಟೆ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬರುವ ವ್ಯವಸ್ಥೆಯಿದೆ.