ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಸ್ವಾತಂತ್ರೋತ್ಸವ ಬಹು ವಿಜೃಂಭಣೆಯಿಂದ ನಡೆಯಿತು. ಎರಡು ವರ್ಷಗಳ ಕಾಲ ಸರಳವಾಗಿ ನಡೆದ ಸ್ವಾತಂತ್ರ ದಿನಾಚರಣೆಯನ್ನು, ಇಂದು ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜದ ಬೊಮ್ಮಾಯಿ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸಿದರು.
ದೇಶಕ್ಕಾಗಿ ಎಲ್ಲರೂ ಕೊಡುಗೆ ನೀಡಿದ್ದಾರೆ: ಧ್ವಜಾರೋಹಣ ನೆರವೇರಿಸಿ ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರನ್ನು ಸ್ಮರಿಸುತ್ತಾ, ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಸ್ವಾತಂತ್ರ್ಯೋತ್ಸವ ಸಮರ್ಪಣೆ ಮಾಡುತ್ತೇನೆ. ನಮ್ಮ ದೇಶಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಮೊದಲ ಹೋರಾಟಗಾರ್ತಿ ಆಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣರನ್ನು ಮರೆಯುವಂತಿಲ್ಲ ಎಂದು ಹೇಳಿದರು.
ದೇಶ ವಿಭಜನೆಯಾದದ್ದು ದುಃಖದ ಸಂಗತಿ : ದೇಶ ವಿಭಜನೆ ಅತ್ಯಂತ ದುಃಖದ ವಿಷಯ. ಆ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತದ ನಂತರ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ನೆಹರು, ಬಳಿಕ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿ ಹಲವರು ಈ ದೇಶವನ್ನು ಆಳಿದ್ದಾರೆ. ನಾವು ಯಾರನ್ನೂ ಮರೆಯುವಂತಿಲ್ಲ. ಎಲ್ಲರೂ ಅವರವರ ಕಾಲದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.
ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ರಚಿಸಿದ ಸಂವಿಧಾನದಿಂದ ನಾವು ಇಂದು ಈ ಸ್ವಾತಂತ್ರ್ಯೋತ್ಸವ ಆಚರಿಸಲು ಸಾಧ್ಯವಾಗಿದೆ. ಆದರೆ, ಅವರ ಬಗ್ಗೆ ಮಾತನಾಡುವುದು ಕಡಿಮೆಯಾಗುತ್ತಿದೆ. ಅವರನ್ನು ಮರೆಸುವಂಥ ಕೆಲಸ ಆಗುತ್ತಿದೆ. ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯ ಕೊಟ್ಟ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ನಾವು ಮರೆಯಬೇಕಾ?. ಭಾರತ ಮತ್ತು ಪಾಕಿಸ್ತಾನ ಒಂದಾಗಬೇಕೆಂದಿದ್ದ ಅಬ್ದುಲ್ ಗಫೂರ್ ಖಾನ್ ರನ್ನು ನಾವು ಮರೆಯಬೇಕಾ? ಎಂದು ಪ್ರಶ್ನಿಸಿದರು.
ದೇಶಕ್ಕಾಗಿ ಬದುಕುವ ಅಗತ್ಯ ಇದೆ : ಇಂದು ದೇಶಕ್ಕಾಗಿ ಪ್ರಾಣ ಕೊಡುವ ಅಗತ್ಯ ಇಲ್ಲ. ದೇಶಕ್ಕಾಗಿ ನಿಮ್ಮ ಶ್ರಮ, ಶ್ರದ್ಧೆ, ಅಭಿಮಾನ, ಗೌರವ, ಬೆವರಿನ ಹನಿ ಮುಖ್ಯವಾಗಿದೆ. ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಇಲ್ಲಿ ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಶೇ.9ರಷ್ಟು ಕೊಡುಗೆ ನಮ್ಮದಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ನವ ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದಕ್ಷ ಮಾರ್ಗದರ್ಶನದಲ್ಲಿ ನಾವು ಇಂದು ಮುನ್ನಡೆಯುತ್ತಿದ್ದೇವೆ. ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟವನ್ನು ಹಿಮ್ಮೆಟ್ಟಿದ್ದೇವೆ. ಇಂದು ನಾವು ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಒಂದು ವರ್ಷದಲ್ಲಿ ಏನು ಮಾಡುತ್ತೇವೆ ಎಂದಿದ್ದೆವು ಅದನ್ನು ಇಂದು ಮಾಡಿ ತೋರಿಸಿ ಇಲ್ಲಿ ನಿಂತಿದ್ದೇವೆ ಎಂದರು.
ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. ಐದು ಲಕ್ಷ ಯುವಕರಿಗೆ ಕೆಲಸ ನೀಡಿದ್ದೇವೆ. ಈಗ ದುಡಿಮೆಯೇ ದೊಡ್ಡಪ್ಪ. ದುಡಿಮೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಕಾರ್ಮಿಕರಿಗೆ 2,500 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾರ್ಯಕ್ರಮ ರೂಪಿಸಿದ್ದೇವೆ.