ಕರ್ನಾಟಕ

karnataka

ETV Bharat / state

ಅಪಘಾತ ಸಂದರ್ಭ ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಮಾಲೀಕರೇ ಪರಿಹಾರ ನೀಡಬೇಕು: ಹೈಕೋರ್ಟ್

ರಸ್ತೆ ಅಪಘಾತದಲ್ಲಿ ವಿಮೆ ನವೀಕರಿಸದ ವಾಹನ ಮಾಲೀಕರೇ ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್​ ಆದೇಶಿಸಿದೆ.

By

Published : Mar 10, 2023, 6:49 AM IST

High Cour
ಹೈಕೋರ್ಟ್

ಬೆಂಗಳೂರು :ಅಪಘಾತ ನಡೆದಾಗ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗಿಲ್ಲದೇ ಇದ್ದರೆ ವಾಹನ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ದೂರುದಾರರು ಅಪಘಾತವೊಂದರಲ್ಲಿ ವಾಹನದ ಮಾಲೀಕರೇ ಪರಿಹಾರ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾ.ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ರಸ್ತೆ ಅಪಘಾತ ನಡೆದ ಮುನ್ನವೇ ವಿಮೆ ನವೀಕರಣವಾಗಿದ್ದರೂ ಘಟನೆ ನಡೆದ ಮರು ದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ 5 ತಾಸು ಮುನ್ನವೇ ವಾಹನದ ವಿಮೆ ನವೀಕರಣ ಮಾಡಿಸಿದ್ದರೂ ಘಟನೆ ನಡೆದ ಮರು ದಿನದಿಂದ ಅನ್ವಯವಾಗಲಿದೆ. ಹೀಗಾಗಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ಕೋರ್ಟ್‌ ಹೇಳಿದೆ. ಇದೇ ವೇಳೆ ವಿಚಾರಣಾ ನ್ಯಾಯಾಲಯ ನೀಡಿದ್ದ ಪರಿಹಾರ ಮೊತ್ತವನ್ನು 15.47 ಲಕ್ಷ ರೂ.ಗಳನ್ನು 13.30 ಲಕ್ಷ ರೂ.ಗೆ ಇಳಿಕೆ ಮಾಡಿತು.

ಪ್ರಕರಣದ ಹಿನ್ನೆಲೆ:2015ರ ಮೇ 21 ರಂದು ರಾತ್ರಿ 9:15ರ ಸಂದರ್ಭದಲ್ಲಿ ಸಯ್ಯದ್ ಸಾದತ್‌ವುಲ್ಲಾ(20) ಎಂಬುವರು ಮೆಹತಾಬ್‌ವುಲ್ಲಾ ಎಂಬುವರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ನಡೆದಿತ್ತು. ಸಯ್ಯದ್ ತೀವ್ರ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದರು. ವಿದ್ಯಾರ್ಥಿಯಾಗಿದ್ದ ಸಯ್ಯದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡು ಮಾಸಿಕ 20 ಸಾವಿರ ರೂ ದುಡಿಯುತ್ತಿದ್ದು, ಪೋಷಕರಿಗೆ ಜೀವನಾಧಾರವಾಗಿತ್ತು. ಹೀಗಾಗಿ 30 ಲಕ್ಷ ರೂ.ಗಳ ಪರಿಹಾರ ಕೊಡಿಸಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ವಾಹನದ ಮಾಲೀಕ ಮೆಹತಾಬ್ ವುಲ್ಲಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಾಹನಕ್ಕೆ ವಿಮೆ ಇದೆ. ವಾಹನ ಚಾಲನಾ ಪರವಾನಿಗೆ ಹೊಂದಿದ್ದೇನೆ. ಹೀಗಾಗಿ ವಿಮಾ ಕಂಪನಿ ಪರಿಹಾರ ನೀಡಬೇಕು. ತಮ್ಮ ವಿರುದ್ಧ ದಾಖಲಾಗಿರವ ಪ್ರಕರಣ ರದ್ದುಗೊಳಿಸಿಬೇಕು ಎಂದು ಮನವಿ ಮಾಡಿದ್ದರು.

ವಿಮಾ ಕಂಪನಿ ಪರ ವಾದಿಸಿದ್ದ ವಕೀಲರು, 2015ರ ಮೇ 21 ರಂದು ರಾತ್ರಿ 9:15ಕ್ಕೆ ರಸ್ತೆ ಅಪಘಾತ ನಡೆದಿದೆ. ಈ ಸಂಬಂಧ ಆ ದಿನವೇ ಪ್ರಕರಣ ದಾಖಲಾಗಿದೆ. 2015 ಮೇ 21ರಂದು ಮಧ್ಯಾಹ್ನ 4:10ಕ್ಕೆ ವಾಹನದ ವಿಮೆ ಪಾಲಿಸಿ ನವೀಕರಣ ಮಾಡಿಸಿದ್ದಾರೆ. ವಿಮೆಯ ಕಾಲಾವಧಿ 2015ರ ಮೇ 22ರ ಮಧ್ಯರಾತ್ರಿಯಿಂದ ಒಂದು ವರ್ಷಕ್ಕೆ ಅನ್ವಯವಾಗಲಿದೆ. ಹೀಗಾಗಿ ಘಟನೆ ನಡೆದ ಸಂದರ್ಭದಲ್ಲಿ ವಾಹನಕ್ಕೆ ವಿಮೆ ಇರಲಿಲ್ಲ. ಆದ್ದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಅಂಶಗಳನ್ನು ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಲಯ ಪರಿಹಾರದ ಮೊತ್ತ ಸುಮಾರು 15.47 ಲಕ್ಷ ರೂ.ಗಳನ್ನು ವಾಹನದ ಮಾಲೀಕನಾದ ಮೆಹತಾಬ್‌ವುಲ್ಲಾ ಮೃತರ ಪೋಷಕರಿಗೆ ಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೆಹತಾಬ್‌ವುಲ್ಲಾ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಹೆಚ್ಚು ಪರಿಹಾರ ಕೊಡಿಸುವಂತೆ ಕೋರಿ ಸಯ್ಯದ್ ಪೋಷಕರು ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿಯನ್ನೂ ಸಲ್ಲಿಸಿದ್ದರು.

ಇದನ್ನೂ ಓದಿ:ಹೆಚ್​ಡಿಕೆ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ ಆರೋಪ: ಸಿಎಸ್​ ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details