ಬೆಂಗಳೂರು:''ವಿಶ್ವಾಸವಿಟ್ಟು ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ನಾನೊಬ್ಬನೇ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಿಮ್ಮೆಲ್ಲರ ಸಹಕಾರ ಪಡೆದು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ನಾನು ಯಾವುದೇ ರೀತಿಯ ದ್ವೇಷ ಭಾವನೆ ಮಾಡದೆ, ನಮ್ಮೆಲ್ಲಾ ಶಾಸಕರನ್ನು ಪ್ರೀತಿಯಿಂದ ವಿಶ್ವಾಸದಿಂದ ನಡೆಸಿಕೊಳ್ಳುತ್ತೇನೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಿಜೆಪಿ ಶಾಸಕರಿಗೆ ಅಭಯ ನೀಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ''ಪ್ರತಿಪಕ್ಷ ನಾಯಕನ ಆಯ್ಕೆಯಾಗದೇ ಇದ್ದರೂ ನಾವು ಸದನದಲ್ಲಿ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಆ ಹೋರಾಟದಲ್ಲಿ ಸದನದಿಂದ 10 ಮಂದಿಯನ್ನು ಅಮಾನತು ಮಾಡಲಾಗಿತ್ತು. ಆ ರೀತಿ ಪ್ರಬಲವಾದ ಹೋರಾಟವನ್ನು ಬಿಜೆಪಿ ಮಾಡಿತ್ತು. ಇವತ್ತು ಅಲ್ಲ, ಬಹಳ ಹಿಂದಿನಿಂದಲೂ ಇದೇ ರೀತಿ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. 34 ಸ್ಥಾನ ಇದ್ದಾಗಲೂ ಕೆಲಸ ಮಾಡಿದ್ದಾರೆ. 79 ಜನ ಇದ್ದಾಗಲೂ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನ ಪಡೆಯುತ್ತೇವೆ. ಅದೇ ರೀತಿ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ಅವರ ಸಹಕಾರ ಇವೆಲ್ಲವನ್ನು ಪಡೆದು ನಾವು ಮುನ್ನಡೆಯಬೇಕಿದೆ. ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ ನಾವು ಸೋತಿದ್ದೇವೆ ಎನ್ನುವ ಭಯ ಬಿಟ್ಟು ಮತ್ತೆ ಸೂರ್ಯ ಉದಯಿಸುತ್ತಾನೆ. ಕಮಲ ಅರಳುತ್ತದೆ ಎನ್ನುವ ಧೈರ್ಯವನ್ನು ಕಾರ್ಯಕರ್ತರಿಗೆ ಕೊಡುವ ಮುಖಾಂತರ ಮತ್ತೆ ಮುಂದೆ ಬರುವ ಚುನಾವಣೆ ಎದುರಿಸಬೇಕು'' ಎಂದು ಶಾಸಕರಿಗೆ ಕರೆ ನೀಡಿದರು.
''ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಬಿಬಿಎಂಪಿ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ತರುವ ರೀತಿಯ ಪ್ರಯತ್ನವನ್ನು ನಾವು ಮಾಡಬೇಕಿದೆ. ನಾನು ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ 45 ವರ್ಷ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಈದ್ಗಾ ಮೈದಾನದ ಹೋರಾಟದಲ್ಲಿ ಭಾಗಿಯಾಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ಮಾಡಿ ಒಂದು ತಿಂಗಳು ಜೈಲುವಾಸ ಅನುಭವಿಸಿದ್ದೆ. ಅಯೋಧ್ಯೆ ವಿಷಯದಲ್ಲಿ ಹೋರಾಟ ಮಾಡಿದ್ದೆ. ನಮ್ಮೆಲ್ಲ ಕಾರ್ಯಕರ್ತರು ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದಾರೆ, ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡೋಣ'' ಎಂದರು.