ಬೆಂಗಳೂರು : ಕೊನೆ ಉಸಿರು ಇರುವವರೆಗೂ ಈ ಪ್ರಾದೇಶಿಕ ಪಕ್ಷಕ್ಕಾಗಿ (ಜೆಡಿಎಸ್) ನಾನು ಹೋರಾಟ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿ ಪಕ್ಷ ತಲೆ ಎತ್ತ ಬಾರದು. ನಾನು ಸತ್ತರೂ ನನ್ನ ಪಕ್ಷ ಉಳಿಯಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಿದ್ದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು, ನನ್ನ ಕಾಲ ಮುಗಿತಾ ಬಂತು. ಇನ್ನು ಮುಂದೆ ಮುಂದಿನ ಪೀಳಿಗೆ ಜವಾಬ್ದಾರಿ. ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಎಲ್ಲ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದರು.
ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಪ್ರಾದೇಶಿಕ ಪಕ್ಷ ಉಳಿಸುವುದಕ್ಕಾಗಿ ಏಳು ಬೀಳು ಎಲ್ಲಾ ನೋಡಿದ್ದೇನೆ. ಈ ಬಾರೀ ಚುನಾವಣೆಯಲ್ಲಿ ಎಲ್ಲಾ ನೋಡಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಕುಟುಂಬದ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ಗೆ ಹಾಗೂ ಹಾಸನದ ಮುಖಂಡರಿಗೆ ಮೂರು ವರ್ಷದ ಹಿಂದೆಯೇ ಹೇಳಿದ್ದೆ. ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ. ನನಗೆ ಈಗಾಗಲೇ 87 ವರ್ಷ. ಮುಂದಿನ ಚುನಾವಣೆ ವೇಳೆಗೆ 92 ವರ್ಷ ಆಗಿರುತ್ತದೆ. ನಾನು ಮುಂದಿನ ಚುನಾವಣೆಗೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದ ದೇವೇಗೌಡರು, ನಿಖಿಲ್ ನಟನಾಗಿ ಒಳ್ಳೆ ಹೆಸರು ಮಾಡಿದ್ದ. ಆದರೆ, ಅವನು ರಾಜಕೀಯಕ್ಕೆ ಬರುತ್ತಾನೆಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಹೇಳಿದರು.