ಬೆಂಗಳೂರು : ವಿಧಾನಸೌಧದಲ್ಲಿ ಬಿಸ್ಲೆರಿ ಬಾಟಲ್ ಇಟ್ಕೊಂಡು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿದರೆ ಸರಿಯಿರುತ್ತಾ? ನಾವು ಸಮಸ್ಯೆಯ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ, ಗ್ರಾಮೀಣ ಭಾಗದಲ್ಲಿ ಸಮಸ್ಯೆಯ ಜೊತೆಯೇ ಅವರಿರುತ್ತಾರೆ. ಹಾಗಾಗಿ ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಈ ವರ್ಷ ಅದಕ್ಕಾಗಿಯೇ ನಮ್ಮ ಬಜೆಟ್ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಿಎಂ, ಜಗತ್ತಿನಲ್ಲಿ ಎಲ್ಲ ದೇಶದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕ ಸುಧಾರಣೆಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಅದಕ್ಕಾಗಿ ನಾಡಿನ ಎಲ್ಲ ಮಹಿಳೆಯರಿಗೆ ಅಂತಾರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು. ಜನ್ಮ ಪೂರ್ವದ ಸಂಬಂಧ ಪ್ರತಿಯೊಬ್ಬ ಮನುಷ್ಯನಿಗೆ ಯಾವುದಾದರೂ ಇದ್ದರೆ ಅದು ತಾಯಿಯ ಸಂಬಂಧ, ಶ್ರೇಷ್ಠವಾದ ಸಂಬಂಧ ತಾಯಿ ಸಂಬಂಧ. ನಂತರ ತಂದೆ ಬರುತ್ತಾರೆ. ಇದೊಂದು ಶ್ರೇಷ್ಠವಾದ ಪವಿತ್ರವಾದ ನೈಸರ್ಗಿಕ ಸಂಬಂಧ. ತಾಯಿ ಸಂಬಂಧ ಇಲ್ಲದೇ ಹೋದರೆ ಬೆಳವಣಿಗೆ ಅಸಾಧ್ಯ. ಇದನ್ನ ಎಲ್ಲ ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ - ಸಿಎಂ: ಇಂದು ಎಲ್ಲಾ ಕೆಲಸವನ್ನ ಮಹಿಳೆಯರಿಂದ ಮಾಡಿಸಿಕೊಳ್ಳುತ್ತೇವೆ. ಮೊದಲು ಇಂಥ ಕೆಲಸ ಪುರುಷರು, ಇಂಥ ಕೆಲಸ ಮಹಿಳೆಯರು ಮಾತ್ರ ಮಾಡಬೇಕು ಅಂತಿತ್ತು. ಆದರೆ ಈಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಪುರಾಣದಲ್ಲೂ ಮಹಿಳೆಯರ ಪಾತ್ರ ಪ್ರಮುಖ ಎನಿಸಿತ್ತು ಎನ್ನೋದು ಜಗತ್ತಿಗೆ ಗೊತ್ತಿದೆ. ಅವತ್ತು ಕಿತ್ತೂರು ರಾಣಿ ಚನ್ನಮ್ಮ ಇದ್ದರು. ಹಾಗೆಯೇ ಇವತ್ತು ನಮ್ಮ ಚೀಫ್ ಸೆಕ್ರೆಟರಿ ವಂದಿತಾ ಶರ್ಮಾ ಮಹಿಳೆ ಇದ್ದಾರೆ. ಮಹಿಳೆಯರಿಗೆ ಯಾವುದು ಅಸಾಧ್ಯ ಅಂತ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಇದ್ದಾರೆ. ಮಂಜುಳಾ ಅವರು ಮೂರ್ನಾಲ್ಕು ಇಲಾಖೆಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲೂ ಮಹಿಳೆಯರ ಪಾತ್ರ ಮುಖ್ಯವಾದದ್ದು, ಮನೆಯಲ್ಲೂ ಕೆಲಸ ಮಾಡಿ ಗದ್ದೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡ್ತಾಳೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಸಹನೆ ಮೆಚ್ಚಿಕೊಳ್ಳಬೇಕು - ಬೊಮ್ಮಾಯಿ:ವಿಧಾನಸೌಧದಲ್ಲಿ ಬಿಸ್ಲರಿ ಬಾಟೆಲ್ ಇಟ್ಟುಕೊಂಡು ಚರ್ಚೆ ಮಾಡೋದು ಸರಿಯಲ್ಲ. ಹಾಗೆಯೇ ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಈ ವರ್ಷ ನಮ್ಮ ಬಜೆಟ್ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಅಂಗನವಾಡಿ ಕಾರ್ಯಕರ್ತೆಯರ ಸಹನೆ ಮೆಚ್ಚಿಕೊಳ್ಳಬೇಕು. ಈ ವರ್ಷ 1ಸಾವಿರ ಗೌರವ ಧನ ಹೆಚ್ಚಳ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗೌರವಧನ ನೀಡುವ ಭರವಸೆ ನೀಡುತ್ತೇನೆ ಎನ್ನುತ್ತಾ ಮಹಿಳೆಯರಿಗಾಗಿ ತಮ್ಮ ಸರ್ಕಾರ ಏನೆಲ್ಲಾ ಯೋಜನೆ ರೂಪಿಸಿದೆ ಎನ್ನುವುದರ ಬಗ್ಗೆ ವಿವರವಾಗಿ ಹೇಳಿದರು.