ಬೆಂಗಳೂರು :ನಾನಿನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ. ಒಂದು ವಿಧಾನಸಭಾ ಸ್ಥಾನದ ಟಿಕೆಟ್‌ಗಾಗಿ ಇಷ್ಟೆಲ್ಲ ನಡೆಯಿತು ಎನ್ನುವ ನೋವಿನಿಂದ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಬಿಜೆಪಿಗೆ ರಾಜೀನಾಮೆ ಸೇರಿದಂತೆ ಇನ್ನೆರಡು ದಿನದಲ್ಲಿ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ ಶೆಟ್ಟರ್ ಶಾಂತಿನಗರದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಸಂಬಂಧಿಯೂ ಆಗಿರುವ ಶಾಮನೂರು ಭೇಟಿಗೆ ಆಗಮಿಸಿರುವ ಶೆಟ್ಟರ್ ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾನು ಪಕ್ಷದ ಸದಸ್ಯತ್ವಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಎಲ್ಲವನ್ನೂ ಸಮಾಲೋಚನೆ ಮಾಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇನೆ. ಕಳೆದ ಹಲವಾರು ತಿಂಗಳುಗಳಿಂದ ನೋವು ಅನುಭವಿಸಿದ್ದೇನೆ. ಕೇವಲ ಒಂದು ವಿಧಾನ ಪರಿಷತ್ ಸ್ಥಾನದ ಟಿಕೆಟ್ ಸಲುವಾಗಿ ಇಷ್ಟೆಲ್ಲ ಆಗಿದೆ ಎಂದು ಹೇಳಿದರು.
ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ನಿನ್ನೆಯೂ ಹುಬ್ಬಳ್ಳಿಯ ನನ್ನ ಮನೆಗೆ ಧರ್ಮೇಂದ್ರ ಪ್ರಧಾನ್, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಸೇರಿ ಕೆಲ ನಾಯಕರು ಬಂದು ಮಾತನಾಡಿದರು. ಈ ಎಲ್ಲ ವಿಷಯದ ಬಗ್ಗೆ ಚರ್ಚೆಯಾಯಿತು. ಆದರೂ ಅಲ್ಲಿ ನನ್ನ ನೋವಿಗೆ ಪರಿಹಾರ ಸಿಗಲಿಲ್ಲ. ಹಾಗಾಗಿ ಬೇಸರಗೊಂಡು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಇಂದು ಅಥವಾ ನಾಳೆ ನಿರ್ಧಾರ ಕೈಗೊಳ್ಳುತ್ತೇನೆ. ಏನೇ ನಿರ್ಧಾರ ಕೈಗೊಂಡರೂ ಮಾಧ್ಯಮಗಳಿಗೆ ತಿಳಿಸಿಯೇ ಕೈಗೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಸೇರುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ನಾನಿನ್ನೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡಿದ ನಂತರ ಮುಂದಿನ ನಡೆ ಬಗ್ಗೆ ಹೇಳುತ್ತೇನೆ. ಇದೆಲ್ಲ ನಿರ್ಧಾರ ಆದ ನಂತರ ಮಾಧ್ಯಮಗಳ ಮುಂದೆ ಬಂದು ನಿರ್ಧಾರ ಪ್ರಕಟಿಸುತ್ತೇನೆ. ನಾಮಪತ್ರ ಸಲ್ಲಿಕೆಗೆ 20ರವರೆಗೂ ಸಮಯ ಇದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.