ಬೆಂಗಳೂರು: ನಟಿ ರಾಗಿಣಿ ನಿವಾಸದ ಮೇಲೆ ದಾಳಿ ನಡೆದಿರುವುದು ಮತ್ತು ಅವರನ್ನು ವಶಕ್ಕೆ ಪಡೆದಿರುವುದು ಸಿಸಿಬಿ ತನಿಖೆಯ ಒಂದು ಭಾಗ. ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಕೆಲಕಾಲ ಮಾತುಕತೆ ನಡೆಸಿ, ಬಳಿಕ ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಮಾಲೋಚನೆ ನಡೆಸಿದರು.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ರಾಗಿಣಿ ವಶಕ್ಕೆ ಪಡೆದಿರುವುದು ಸಿಸಿಬಿ ತನಿಖೆಯ ಒಂದು ಭಾಗವಾಗಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಸಿಸಿಬಿ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವವರೆಗೂ ಕಾರ್ಯಾಚರಣೆಯನ್ನು ನಾವು ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಡ್ರಗ್ಸ್ ತನಿಖೆ ತೀವ್ರಗತಿಯಲ್ಲಿ ಪ್ರಗತಿಯಾಗುತ್ತಿದ್ದು, ಹೊಸ ಆಯಾಮಗಳು ಸಿಗುತ್ತಿವೆ. ಡ್ರಗ್ಸ್ ಪೂರೈಕೆಯ ಮೂಲ ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರಗಳಲ್ಲಿ ಡ್ರಗ್ಸ್ ದಂಧೆ ಇರುವ ಸಾಧ್ಯತೆ ಇದೆ. ಹಾಗಾಗಿ ನಾಳೆ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ, ಕೆಲವು ಸೂಚನೆಗಳನ್ನು ಕೊಡಲಾಗುತ್ತದೆ. ಎಲ್ಲೆಡೆ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದರು.