ಕರ್ನಾಟಕ

karnataka

ETV Bharat / state

ಮುಂದಿನ ಆರು ತಿಂಗಳಲ್ಲಿ ಪಿಎಸ್​ಐ ಸೇರಿ ವಿವಿಧ ಹುದ್ದೆಗಳಿಗೆ 4547 ಮಂದಿ ನೇಮಕ: ಡಾ ಜಿ ಪರಮೇಶ್ವರ್

ಮುಂದಿನ ಆರು ತಿಂಗಳಲ್ಲಿ 1547 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

By ETV Bharat Karnataka Team

Published : Nov 22, 2023, 7:30 PM IST

ಬೆಂಗಳೂರು :ಮುಂದಿನ ಆರು ತಿಂಗಳಲ್ಲಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ 4547 ಮಂದಿಯನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಪೈಕಿ 1547 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್​ಗಳು, 3000 ಮಂದಿ ಕಾನ್ಸ್​​ಟೇಬಲ್​ಗಳು ಇರಲಿದ್ದಾರೆ ಎಂದು ಹೇಳಿದರು.

ನ್ಯಾಯಾಲಯದಿಂದ ಒಪ್ಪಿಗೆ ದೊರೆತ ಹಿನ್ನೆಲೆ 545 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಹುದ್ದೆಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಭರ್ತಿ ಮಾಡಲಾಗುವುದು. ನಂತರ 402 ಪೊಲೀಸ್ ಸಬ್​ಇನ್ಸ್​​ಪೆಕ್ಟರ್​ಗಳ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಬಳಿಕ 600 ಮಂದಿ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುವುದು ಎಂದ ಅವರು, ಒಟ್ಟಾರೆಯಾಗಿ 1547 ಪಿಎಸ್​ಐ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದರು. ಇದೇ ರೀತಿ ಮೂರು ಸಾವಿರ ಕಾನ್ಸ್​ಟೇಬಲ್​ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆದಷ್ಟು ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಪೊಲೀಸ್ ಇಲಾಖೆಗೆ ಇನ್ನೂ ಹದಿನೈದು ಸಾವಿರ ಕಾನ್ಸ್​​ಟೇಬಲ್​ಗಳ ಅಗತ್ಯವಿದೆ. ಹಂತ ಹಂತವಾಗಿ ಇದನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾಗುವವರಿಗೆ ತರಬೇತಿ ನೀಡುವ ಅಗತ್ಯ ಇರುವುದರಿಂದ ಒಂದೇ ಕಂತಿನಲ್ಲಿ ಇಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.

ಪ್ರತಿ ವರ್ಷ ನಿವೃತ್ತಿಯಾಗುವ ಪೊಲೀಸ್​ ಸಿಬ್ಬಂದಿ ಜಾಗಕ್ಕೆ ಹೊಸ ನೇಮಕಾತಿ ಮಾಡಿಕೊಳ್ಳಲು ಈಗ ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಬೇಕು. ಆದರೆ, ನಿವೃತ್ತರ ಜಾಗಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದು ಹೇಳಿದರು.

ನಿವೃತ್ತ ಪೊಲೀಸ್​ ಸಿಬ್ಬಂದಿ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದು ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕಾನೂನು ತಂದಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಿವೃತ್ತ ಪೊಲೀಸ್​ ಸಿಬ್ಬಂದಿ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಬೇಕು ಎಂದು ನಿಯಮ ಬದಲಿಸಿದೆ. ಆದರೆ, ಹೊಸ ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡುವುದು ಸರಿ. ಆದರೆ, ಅಸ್ತಿತ್ವದಲ್ಲಿರುವ ಹುದ್ದೆಗಳ ಅನುಮತಿಗೆ ಅದರ ಅನುಮತಿ ಬೇಕಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಈ ನಿಯಮ ಬದಲಿಸಿ ಕಾನೂನು ರೂಪಿಸಲಾಗುವುದು ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕು ಎಂಬ ಕಾನೂನನ್ನು ರೂಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳನ್ನು ಡ್ರಗ್ ಮುಕ್ತ ಜಿಲ್ಲೆಗಳೆಂದು ಘೋಷಿಸಲು ಸಿದ್ಧತೆ ನಡೆಸಲಾಗಿದೆ ಎಂದು ನುಡಿದರು.

ಸಿಂಥೆಟಿಕ್ ಡ್ರಗ್ ವಿಷಯದಲ್ಲಿ ಸರ್ಕಾರಕ್ಕೆ ಆತಂಕವಿದ್ದು, ಗಾಂಜಾದಂತಹ ಮಾದಕ ವಸ್ತುಗಳಿಗಿಂತ ಎಂ.ಡಿ.ಎಂ.ಎ ನಂತಹ ಸಿಂಥೆಟಿಕ್ ಡ್ರಗ್​ಗಳು ತುಂಬಾ ಅಪಾಯಕಾರಿ ಎಂದರಲ್ಲದೇ, ಡ್ರಗ್ಸ್ ಜಾಲದ ವಿರುದ್ಧ ಪೊಲೀಸ್ ಇಲಾಖೆ ಹಿಂದೆಂದಿಗಿಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸುವ ಸಂಬಂಧ ಚರ್ಚೆ ನಡೆದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪರಿಣಾಮಕಾರಿಯಾದ ಹೆಜ್ಜೆ ಇಡಲಾಗುವುದು ಎಂದು ವಿವರಿಸಿದರು. ರೌಡಿಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಏನೇ ಮಾಡಿದ್ರೂ ನಿಯಂತ್ರಣಕ್ಕೆ ಬರದ ರೌಡಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ :ಅಪರಾಧ ಚಟುವಟಿಕೆ ತಡೆಗೆ ರಾಜ್ಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ: ಜಿ ಪರಮೇಶ್ವರ್

ABOUT THE AUTHOR

...view details