ಬೆಂಗಳೂರು: ನಗರದಲ್ಲಿ ವಿವಿಧ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೌಡಿಗಳನ್ನು ಹೆಡೆಮುರಿಕಟ್ಟಬೇಕು. ಈ ಮೂಲಕ ರೌಡಿಮುಕ್ತ ಬೆಂಗಳೂರು ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದ್ದಾರೆ.
ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಎಸಿಪಿಗಿಂತ ಮೇಲ್ಪಟ್ಟ ಅಧಿಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಳೆ ವೈಷಮ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಗರದಲ್ಲಿ ರೌಡಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇದನ್ನು ತಳಮಟ್ಟದಲ್ಲಿ ಕಟ್ಟಿಹಾಕಬೇಕಾದ ಜವಾಬ್ದಾರಿ ಪೊಲೀಸರ ಮೇಲಿದೆ. ಬೆಂಗಳೂರು ರೌಡಿ ಮುಕ್ತ ನಗರವಾಗಬೇಕು. ಈ ಸಲುವಾಗಿ ನಗರ ಪೊಲೀಸರು ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಸಭೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರ ಪೊಲೀಸರು ಇದೇ ಮೊದಲ ಬಾರಿಗೆ ಆನ್ಲೈನ್ನಲ್ಲೇ ಗನ್ ಲೈಸೆನ್ಸ್ ನೀಡುವ ಯೋಜನೆ ಜಾರಿಗೆ ತಂದಿದ್ದಾರೆ. ಕೊರೊನಾ ಆತಂಕದ ಮಧ್ಯೆ ಸಂಪರ್ಕರಹಿತವಾಗಿ ಈ ವ್ಯವಸ್ಥೆ ಪರಿಚಯಿಸಿರುವುದು ಒಳ್ಳೆಯ ಸಂಗತಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿಸ್ತರಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.
ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣವಾಗಬೇಕಾದರೆ ಗಸ್ತು ವ್ಯವಸ್ಥೆ ಮತ್ತಷ್ಟು ಬಲಗೊಳಿಸಬೇಕು. ಈ ದಿಸೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ರೌಡಿಗಳ ಮುಖಾಂತರ ಭೂ ಮಾಲೀಕರನ್ನು ಬೆದರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಸಹ ಕೈ ಹಾಕುತ್ತಿದ್ದಾರೆ. ಹೀಗಾಗಿ, ಪೊಲೀಸರು ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳದಂತೆ ತಾಕೀತು ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.
ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಬರುವ ವಿದೇಶಿಯರು ನಗರದಲ್ಲಿ ನೆಲೆಸಿರುವ ಬಗ್ಗೆ ಆಯಾ ಠಾಣೆಗಳ ಪೊಲೀಸರು ನಿಗಾವಹಿಸಬೇಕು. ಜೊತೆಗೆ ಅವರ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಿರಬೇಕು. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಯೂರಿರುವುದು ಸಾಬೀತಾದರೆ ಅಂಥವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ವಿದೇಶಿಯರಿಗೆ ಆಧಾರ್ ಕಾರ್ಡ್, ಗುರುತಿನ ಚೀಟಿ ನೀಡುವ ಜಾಲವೇ ನಗರದಲ್ಲಿದೆ. ಅಂಥವರನ್ನು ಬಂಧಿಸಿ ಹೆಡೆಮುರಿಕಟ್ಟಬೇಕೆಂದು ಸೂಚನೆ ನೀಡಿದ್ದೇನೆ ಎಂದರು.
ನಗರದಲ್ಲಿ ತಲೆಎತ್ತಿರುವ ಇಸ್ಪೀಟ್, ಕ್ಯಾಸಿನೋ ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚಿಸುವ ಕೆಲಸವಾಗಬೇಕು. ಇದರಿಂದ ಎಷ್ಟೋ ಕುಟುಂಬಗಳ ಮನೆ ಮುರಿಯುವ ಕೆಲಸವಾಗುತ್ತಿದೆ. ಸ್ಕಿಲ್‌ಗೇಮ್ ಹೊರತುಪಡಿಸಿ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ನಿಲ್ಲಿಸಲು ಈಗಾಗಲೇ ಕಾಯ್ದೆ ಜಾರಿ ಮಾಡಲಾಗಿದೆ. ಈಗಲೂ ಬೆಟ್ಟಿಂಗ್ ನಲ್ಲಿ ಭಾಗಿಯಾದರೆ ಬಂಧಿಸುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟಕ್ಕೆ ಸಿದ್ಧ: ಏನಿದರ ವಿಶೇಷತೆ?