ಬೆಂಗಳೂರು:ಕರ್ನಾಟಕ ಹೈಕೋರ್ಟ್ ನೀಡಿರುವ ಹಿಜಾಬ್ ಪ್ರಕರಣದ ಐತಿಹಾಸಿಕ ತೀರ್ಪು ವಿರೋಧಿಸಿ ರಾಜ್ಯದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕಾರ ಮಾಡಿದ್ದು, ಯಾವುದೇ ಕಾರಣಕ್ಕೂ ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪರೀಕ್ಷೆಗಳಿಗೆ ಗೈರು ಹಾಜರಾದವರಿಗೆ ಮರು ಪರೀಕ್ಷೆ ನಡೆಸುವ ಯಾವುದೇ ವ್ಯವಸ್ಥೆ ಇಲ್ಲ. ಪರೀಕ್ಷೆಗಳಲ್ಲಿ ಫೇಲ್ ಆದವರಿಗೆ ಮಾತ್ರ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಗೈರು ಹಾಜರಾದವರಿಗೆ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಇಲ್ಲ. ಅಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದರು.
ನ್ಯಾಯಾಲಯ ಹೊರಹಾಕಿರುವ ತೀರ್ಪನ್ನು ನಾವು ಪಾಲನೆ ಮಾಡುತ್ತೇವೆ. ಇಲ್ಲಿ ಪರೀಕ್ಷೆಗಳಿಗೆ ಗೈರು ಹಾಜರಾಗಿರುವುದು ಮುಖ್ಯವೇ ಹೊರತು ಹಿಜಾಬ್ ವಿವಾದ ಅಥವಾ ಅನಾರೋಗ್ಯ ಕಾರಣ ಅಲ್ಲ ಎಂದಿದ್ದಾರೆ. ಹಿಜಾಬ್ ಕಾರಣವನ್ನು ಮಾನವೀಯ ಆಧಾರದ ಮೇಲೆ ನಾವು ಪರಿಗಣಿಸಿದರೆ, ನಾಳೆ ಜನರು ಪರೀಕ್ಷೆಗಳಿಗೆ ಹಾಜರಾಗಲು ಅನೇಕ ರೀತಿಯ ಕಾರಣ ನೀಡುತ್ತಾರೆ. ಆ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂದು ಸಚಿವರು ಮರು ಪ್ರಶ್ನಿಸಿದರು.
ಇದನ್ನೂ ಓದಿ:ಹಿಜಾಬ್ ವಿವಾದ : ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು
ಕರ್ನಾಟಕ ಹೈಕೋರ್ಟ್ನಿಂದ ಹಿಜಾಬ್ ತೀರ್ಪು ಹೊರಬರುತ್ತಿದ್ದಂತೆ ಯಾದಗಿರಿ,ಭಟ್ಕಳ,ಶಿವಮೊಗ್ಗ, ಮಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕಾರ ಮಾಡಿದ್ದರು. ಇದರ ಬೆನ್ನಲ್ಲೇ ಮರು ಪರೀಕ್ಷೆ ನಡೆಸಬೇಕು ಎಂಬ ಕೂಗು ಕೇಳಿ ಬಂದಿತ್ತು.