ಕರ್ನಾಟಕ

karnataka

ETV Bharat / state

ಅಭಯಾರಣ್ಯದಲ್ಲಿ ರೈಲ್ವೆ ಯೋಜನೆ ಪ್ರಶ್ನಿಸಿ ಪಿಐಎಲ್: ಕೇಂದ್ರ-ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

ಪಶ್ಚಿಮ ಘಟ್ಟದ ಕಾಳಿ ಹುಲಿ ಮೀಸಲು ಪ್ರದೇಶದ ಮೂಲಕ ಹಾದು ಹೋಗುವ ಹೊಸಪೇಟೆ-ವಾಸ್ಕೋಡಗಾಮ ರೈಲು ಮಾರ್ಗ ಯೋಜನೆ ಸಂಬಂಧ ಹೈಕೋರ್ಟ್​​ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ ನೋಟಿಸ್​ ನೀಡಿದೆ.

highcourt
highcourt

By

Published : May 24, 2021, 10:05 PM IST

ಬೆಂಗಳೂರು : ಪಶ್ಚಿಮ ಘಟ್ಟದ ಕಾಳಿ ಹುಲಿ ಮೀಸಲು ಪ್ರದೇಶದ ಮೂಲಕ ಹಾದು ಹೋಗುವ ಹೊಸಪೇಟೆ-ವಾಸ್ಕೋಡಗಾಮ ರೈಲು ಮಾರ್ಗ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಪರಿಸರವಾದಿ ಎ.ಎನ್ ಯಲ್ಲಪ್ಪರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ, ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ನೈಋತ್ಯ ರೈಲ್ವೆ ಹಾಗೂ ರಾಜ್ಯ ಸರ್ಕಾರ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಾದಿಸಿದ ಅರ್ಜಿದಾರರ ಪರ ವಕೀಲರು, ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಒಳಗೊಂಡ ಪಶ್ಚಿಮಘಟ್ಟದಲ್ಲಿ ಹೊಸಪೇಟೆ-ಹುಬ್ಬಳ್ಳಿ ಮತ್ತು ಲೋಂಡಾ ನಡುವಿನ ವಾಸ್ಕೋಡಗಾಮ ರೈಲ್ವೆ ಮಾರ್ಗವನ್ನು ಡಬ್ಲಿಂಗ್ ಮಾಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ 2021ರ ಜ.5ರಂದು ಅನುಮೋದನೆ ನೀಡಿದೆ. ಇದು ಪರಿಸರದ ಮೇಲೆ ಭಾರಿ ಪ್ರಮಾಣದ ಹಾನಿ ಉಂಟು ಮಾಡಲಿದೆ. ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಅಪರೂಪದ ಪ್ರಾಣಿ, ಪಕ್ಷಿ ಸಂಕುಲ ಹಾಗೂ ದಟ್ಟ ಕಾನನ ಹೊಂದಿರುವ ಜಾಗವಾಗಿದ್ದು, ಇಲ್ಲಿ ರೈಲ್ವೆ ಮಾರ್ಗ ವಿಸ್ತರಣೆ ಮಾಡಿದರೆ ಇಡೀ ಪಶ್ಚಿಮಘಟ್ಟದ ಜೈವಿಕ ಪ್ರಪಂಚದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಯೋಜನೆಗೆ ಪರಿಸರವಾದಿಗಳಷ್ಟೇ ಅಲ್ಲ, ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯೂ ವಿರೋಧಿಸಿತ್ತು. ಹಾಗಿದ್ದೂ, ಸರ್ಕಾರ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ವಿವರಿಸಿದರು.

ಅರ್ಜಿದಾರರ ಕೋರಿಕೆ :
ಹೊಸಪೇಟೆ- ವಾಸ್ಕೋಡಗಾಮ ನಡುವಿನ ಜೋಡಿ ರೈಲು ಮಾರ್ಗ ಪಶ್ಚಿಮಘಟ್ಟದ ಮೂಲಕ ಕರ್ನಾಟಕ ಹಾಗೂ ಗೋವಾ ನಡುವೆ 353 ಕಿ.ಮೀ ಹಾದು ಹೋಗಲಿದೆ. ಬಳ್ಳಾರಿ-ಹೊಸಪೇಟೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅದಿರು ಉತ್ಪಾದಿಸಲಾಗುತ್ತಿದ್ದು, ಅದನ್ನು ವಾಸ್ಕೋಡಗಾಮದ ಮೂಲಕ ಸಾಗಣೆಗೆ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ಇಡೀ ಪಶ್ಚಿಮ ಘಟ್ಟದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಯೋಜನೆಗೆ ತಡೆ ನೀಡಬೇಕು. ಕೇಂದ್ರದ ಅನುಮತಿ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details