ಕರ್ನಾಟಕ

karnataka

ETV Bharat / state

ಹೈ ವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ: 48 ತಾಸು ಶೂನ್ಯ ವೇಳೆ, ಇನ್ನೇನಿದ್ದರು ಮನೆ ಮನೆ ಪ್ರಚಾರ - ರಾಜ್ಯದ ಮೂರು ರಾಜಕೀಯ ಪಕ್ಷಗಳು

ರಾಜ್ಯದ ಮೂರು ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲು ಇಂದು ತಮ್ಮ ಅಂತಿಮ ಕಸರತ್ತು ನಡೆಸಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ
ಬಹಿರಂಗ ಪ್ರಚಾರಕ್ಕೆ ತೆರೆ

By

Published : May 8, 2023, 7:49 PM IST

ಬೆಂಗಳೂರು : ರಾಜ್ಯ ಚುನಾವಣಾ ಸಮರಕಣ ಅಂತಿಮ ಹಂತಕ್ಕೆ ಬಂದಿದೆ. ಹೈವೋಲ್ಟೇಜ್ ಗದ್ದುಗೆ ಗುದ್ದಾಟದ ಬಹಿರಂಗ ಪ್ರಚಾರದ ಅಬ್ಬರ ಇಂದು ಸಂಜೆ ಆರು ಗಂಟೆಗೆ ಅಂತ್ಯವಾಗಿದೆ. ಇನ್ನೇನಿದ್ದರೂ ಮನೆ ಮನೆ ಪ್ರಚಾರದ ಮೂಲಕ ಕ್ಷೇತ್ರದ ಅಭ್ಯರ್ಥಿಗಳು ಮತಬೇಟೆ ನಡೆಸಲಿದ್ದಾರೆ.

ರಾಜ್ಯದ ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರರ ಮನಗೆಲ್ಲಲು ಇಂದು ತಮ್ಮ ಅಂತಿಮ ಕಸರತ್ತು ನಡೆಸಿದ್ದಾರೆ. ಮೇ 10ರ ಚುನಾವಣೆಗಾಗಿನ ಜಿದ್ದಾಜಿದ್ದಿನ ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಆ ಮೂಲಕ 40 ದಿನಗಳ ವಿವಿಧ ಪಕ್ಷಗಳ ಪ್ರಚಾರದ ಅಬ್ಬರಕ್ಕೆ ತೆರೆ ಬಿದ್ದಿದೆ. ಸೋಮವಾರ ಸಂಜೆಯಿಂದ ಮಂಗಳವಾರದ ಸಂಜೆ 6 ಗಂಟೆವರೆಗೆ ಮನೆ ಮನೆ ಪ್ರಚಾರ ನಡೆಯಲಿದೆ. ಕದನ‌ ಕಲಿಗಳು ಅಂತಿಮ ದಿನವಾದ ಇಂದು ತಮ್ಮ‌ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಬಹಿರಂಗ ಪ್ರಚಾರ ನಡೆಸಿದರು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಲಾಸ್ಟ್ ಡೇ, ಲಾಸ್ಟ್ ಶೋ ಮಾಡಿದರು.

48 ತಾಸಿನ ಶೂನ್ಯ ವೇಳೆ : ಮತದಾನದ ಮುಕ್ತಾಯಕ್ಕೆ ನಿಗದಿ ಪಡಿಸಿದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆ, ಬಹಿರಂಗ ಪ್ರಚಾರ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮಾಧ್ಯಮಗಳಿಗೆ ನಿರ್ಬಂಧ ಇರುತ್ತದೆ.

ಮನೆ ಮನೆ ಪ್ರಚಾರ :ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಇನ್ನು ಏನಿದ್ದರೂ ಮನೆ ಮನೆ ಪ್ರಚಾರದ ಮೂಲಕ‌ ಅಭ್ಯರ್ಥಿಗಳು ಮತಬೇಟೆ ಮಾಡಲಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಮಂಗಳವಾರ ಸಂಜೆ 6 ಗಂಟೆವರೆಗೆ ಕ್ಷೇತ್ರದ ಅಭ್ಯರ್ಥಿಗಳು ಮನೆ ಮನೆ ತೆರಳಿ ಮತಯಾಚನೆ ಮಾಡಬಹುದು.

144 ಸೆಕ್ಷನ್ ಜಾರಿ :ಚುನಾವಣೆ ಒಳಪಡುವ ಕ್ಷೇತ್ರಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 (ಪಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ಮತದಾನ ಮುಕ್ತಾಯಕ್ಕೆ ಕೊನೆಗೊಳ್ಳುವ 48 ಗಂಟೆಗಳ ಕಾಲವಧಿಯಲ್ಲಿ ಕಾನೂನು ಬಾಹಿರ ಸಭೆಗಳನ್ನು ನಿಷೇಧಿಸಲಾಗುವುದು. 144 ನಿಷೇಧಾಜ್ಞೆ ಆದೇಶದ ಅಡಿಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚು ವ್ಯಕ್ತಿಗಳು ಸೇರುವುದು, ಒಟ್ಟಿಗೆ ಸಂಚರಿಸಲು ಅನುಮತಿ ಇರುವುದಿಲ್ಲ. ಆದರೆ ಮನೆ-ಮನೆ ಪ್ರಚಾರಕ್ಕೆ ಸಂಬಂಧಿಸಿದಂತೆ 48 ಗಂಟೆಗಳ ಅವಧಿಯಲ್ಲಿ ಮನೆ ಮನೆ ಭೇಟಿಗೆ ನಿರ್ಬಂಧ ಇರುವುದಿಲ್ಲ.

ಶೂನ್ಯ ವೇಳೆ ಅಂದರೆ ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರ 48 ಗಂಟೆಯಲ್ಲಿ ಹೊರಗಿನಿಂದ ಬಂದಿರುವ ಮತ್ತು ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಸೇರಿದಂತೆ ಮುಂತಾದವರು ಕ್ಷೇತ್ರದಲ್ಲಿ ಉಳಿಯಬಾರದು. ಅಂತಹ ವ್ಯಕ್ತಿಗಳು ಪ್ರಚಾರದ ಅವಧಿ ಮುಗಿದ ತಕ್ಷಣ ಕ್ಷೇತ್ರವನ್ನು ತೊರೆಯಬೇಕು. ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್‌ ಕ್ಷೇತ್ರದಲ್ಲಿ ಮತದಾರ ಅಲ್ಲದಿದ್ದರೂ ಈ ನಿರ್ಬಂಧ ಅನ್ವಯಿಸುವುದಿಲ್ಲ.

ಮದ್ಯ ಮಾರಾಟ ನಿಷೇಧ :ಮತದಾನ ಪೂರ್ಣಗೊಳ್ಳುವವರೆಗೆ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ ದಿನ ಎಂದು ಘೋಷಿಸಲಾಗುತ್ತದೆ. ಮೇ 8 ಸಂಜೆ 6 ಗಂಟೆಯಿಂದ ಮೇ 10ರ ವರೆಗೆ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. ನೆರೆಯ ರಾಜ್ಯಗಳ ಎಲ್ಲಾ 26 ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ನಿಷೇಧ ದಿನ ಘೋಷಣೆಯ ಆದೇಶ ಹೊರಡಿಸಲಾಗಿದೆ‌. ಮತದಾನ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಮಾಧ್ಯಮಗಳಿಗೆ ಮಾರ್ಗಸೂಚಿಗಳು :ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ರಾಜ್ಯ ಜಿಲ್ಲಾ ಮಟ್ಟದಲ್ಲಿ ಎಂಸಿಎಂಸಿ ಸಮಿತಿಯಿಂದ ಮುಂಚಿತವಾಗಿ ಪ್ರಮಾಣೀಕರಿಸಲ್ಪಟ್ಟಿದೆ. ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ಇತರೆ ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಗಳು ಯಾವುದೇ ತರಹದ ಜಾಹೀರಾತನ್ನು 2023ರ ಮೇ9 ಮತ್ತು 10 ರಂದು ಚುನಾವಣೆ ಒಂದು ದಿನ ಮೊದಲು ಮತ್ತು ಮತದಾನದ ದಿನದಂದು ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ವಿಷಯಗಳನ್ನು ಹೊರತುಪಡಿಸಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು.

ಇದನ್ನೂ ಓದಿ :ಜೆ.ಪಿ ನಡ್ದಾ ಮೇಲಿಂದ ಮೇಲೆ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

ABOUT THE AUTHOR

...view details