ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಡಾ.ಗೋವಿಂದರಾಜು ಹಾಗೂ ಪ್ರೇಮ್ ಸೋಹನ್ ಲಾಲ್ ಅವರ ನಾಮನಿರ್ದೇಶನವನ್ನು ಹಿಂಪಡೆದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೇ, ಪ್ರತಿವಾದಿಗಳಾದ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿವಿ ಕುಲಸಚಿವ, ಅರ್ಜಿದಾರರ ಸ್ಥಾನಕ್ಕೆ ನಿಯೋಜನೆಯಾಗಿರುವ ಡಾ.ಸಿ.ಆರ್.ಮಹೇಶ್ ಮತ್ತು ಡಾ. ಅನಿಲ್ ಕುಮಾರ್ ಈಶೋ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ನಾಮನಿರ್ದೇಶನ ಹಿಂಪಡೆದ ಸರ್ಕಾರದ ಆದೇಶ ಪ್ರಶ್ನಿಸಿ ಗೋವಿಂದರಾಜು ಮತ್ತು ಪ್ರೇಮ್ ಸೋಹನ್ ಲಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ ಪಂಡಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ವಿವಿ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶಿತರಾದವರು ನಾಮನಿರ್ದೇಶನ ಮಾಡಿದ ಪ್ರಾಧಿಕಾರ ನಿಗದಿಪಡಿಸಿದ ಸಮಯದವರಗೆ ಅಧಿಕಾರ ಹೊಂದಿರುತ್ತಾರೆ. ಆದರೆ, ಅರ್ಜಿದಾರರ ನಾಮನಿರ್ದೇಶನ ಹಿಪಡೆದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ, ಪ್ರಕರಣವನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ. 2022ರ ಏ.7ರಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ 3 ತಿಂಗಳ ಕಾಲ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.