ಬೆಂಗಳೂರು:ವೈದ್ಯಕೀಯ ಮಂಡಳಿ ವಿಶೇಷಚೇತನ ಅಭ್ಯರ್ಥಿಯ ಅಂಗವೈಕಲ್ಯ ಪ್ರಮಾಣವನ್ನು ನಿರ್ಧರಿಸಬೇಕೇ ವಿನಾ ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ದೈಹಿಕವಾಗಿ ಶೇ.50ರಷ್ಟು ಅಂಗವೈಕಲ್ಯ ಹೊಂದಿರುವ ನೀಟ್ ಅಭ್ಯರ್ಥಿಯೊಬ್ಬರಿಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿಲ್ಲ ಎಂಬುದಾಗಿ ನಿರ್ಧರಿಸಿ ಪ್ರಮಾಣ ಪತ್ರ ನೀಡಿದ್ದ ವೈದ್ಯಕೀಯ ಮಂಡಳಿಯ ಕ್ರಮವನ್ನು ವಜಾಗೊಳಿಸಿತು.
ಚಿಕ್ಕಮಗಳೂರಿನ ಸಾದರಹಳ್ಳಿಯ ಡಾ.ಎಸ್.ಎನ್.ಪೂಜಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ವೈದ್ಯಕೀಯ ಮಂಡಳಿಯು ಆಯ್ಕೆ ಪ್ರಾಧಿಕಾರವಲ್ಲ. ಹೀಗಾಗಿ, ಅಭ್ಯರ್ಥಿಯ ಪ್ರವೇಶಾತಿಯ ಅರ್ಹತೆಯ ಬಗ್ಗೆ ಪ್ರಮಾಣ ಪತ್ರ ನೀಡುವಂತಿಲ್ಲ. ಪ್ರವೇಶದ ಅರ್ಹತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಅಂದರೆ ಆಯ್ಕೆ ಪ್ರಾಧಿಕಾರ ನಿರ್ಧರಿಸುವ ಅಗತ್ಯವಿದೆ. ವೈದ್ಯಕೀಯ ಮಂಡಳಿ ತನ್ನ ವ್ಯಾಪ್ತಿ ಮೀರಿ ನಡೆದುಕೊಂಡಿದೆ. ಈ ರೀತಿ ನಡೆದುಕೊಳ್ಳಲು ಅವಕಾಶ ಇಲ್ಲ. ಅಂಗವೈಕಲ್ಯದ ಪ್ರಮಾಣ ಆಧರಿಸಿ ವಿಶೇಷಚೇತನರು ಕಾನೂನು ಪ್ರಕಾರ ಪಡೆಯಬೇಕಾದ ಸೌಲಭ್ಯ ಪಡೆದುಕೊಳ್ಳಲು ಅರ್ಹರಿರುತ್ತಾರೆ ಎಂದು ನ್ಯಾಯಪೀಠ ಕಟುವಾಗಿ ನುಡಿದಿದೆ.
ತಜ್ಞ ಸಂಸ್ಥೆಯಾದ ಮಂಡಳಿಯು ಕೇವಲ ಅಂಗವೈಕಲ್ಯ ಪ್ರಮಾಣ ಪರಿಶೀಲಿಸಿ ನಿರ್ಣಯಿಸಬಹುದಷ್ಟೇ. ಅದನ್ನು ಹೊರತುಪಡಿಸಿ ಅಭ್ಯರ್ಥಿಯು ವೈದ್ಯಕೀಯ ಪದವಿ ಅಧ್ಯಯನ ಮಾಡಲು, ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದರಂತೆ ಪ್ರಕರಣದಲ್ಲಿ ವೈದ್ಯಕೀಯ ಮಂಡಳಿಯು ವಿದ್ಯಾರ್ಥಿನಿ ವೈದ್ಯಕೀಯ ಪದವಿ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂದು ನಿರ್ಧಾರ ಮಾಡಿರುವುದು ಸಂಪೂರ್ಣವಾಗಿ ಅಸಮರ್ಥನೀಯ ಮತ್ತು ಅಕ್ರಮವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.