ಬೆಂಗಳೂರು:ಖಾಸಗಿ ಬಡಾವಣೆಯ ಸ್ಥಳದಲ್ಲಿ ರಸ್ತೆ ಮತ್ತು ಇತರೆ ಸೌಲಭ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ವಹಿಸಿದ ಬಳಿಕ ಆ ಜಾಗದ ಮೇಲೆ ಭೂ ಮಾಲೀಕರಿಗಾಗಲೇ ಅಥವಾ ಬಡಾವಣೆ ನಿರ್ಮಾಣದಾರರಿಗಾಗಲೀ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೆಳ್ಳಂದೂರು ಹೊರ ವರ್ತುಲ ಪ್ರದೇಶದ ನಿವಾಸಿ ಪಬ್ಬಾರೆಡ್ಡಿ ಕೋದಂಡರಾಮಿ ರೆಡ್ಡಿ ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಬಡಾವಣೆಯ ಜಾಗವನ್ನು ರಸ್ತೆಗಳು ಮತ್ತು ಸಾರ್ವಜನಿಕ ಸೌಕರ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗೆ ನೀಡಿದ ನಂತರ ಆ ಜಾಗದ ಮೇಲೆ ಭೂ ಮಾಲೀಕರು ಹಾಗೂ ಬಡಾವಣೆ ನಿರ್ಮಾಣದಾರರಿಗೆ ಹಕ್ಕು ಇರುವುದಿಲ್ಲ. ಸಾರ್ವಜನಿಕ ಸೌಕರ್ಯಗಳನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ವಹಿಸುತ್ತಾರೆ. ಅವರು ಎಲ್ಲಾ ಸಾರ್ವಜನಿಕರಿಗೆ ಬಳಸಲು ಅನುಮತಿಸುತ್ತಾರೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಆನೇಕಲ್ ತಾಲೂಕಿನ ಇಡ್ಲುಬೆಲೆ ಗ್ರಾಮದಲ್ಲಿ ಸುಮಾರು 11 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣಕ್ಕೆ ಉಪಕಾರ್ ರೆಸಿಡೆನ್ಸಿ ಪ್ರೈವೇಟ್ ಲಿಮಿಟೆಡ್ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿತ್ತು. ಆ ಸ್ಥಳದ ಪಕ್ಕದಲ್ಲಿರುವ 14 ಎಕರೆ ಜಾಗದಲ್ಲಿ ಮೇಲ್ಮನವಿದಾರ ಪಬ್ಬಾರೆಡ್ಡಿ ಅವರು ಲೇಔಟ್ ನಿರ್ಮಾಣ ಮಾಡಿದ್ದಾರೆ. ಬಡಾವಣೆಯ ಸ್ವಲ್ಪ ಜಾಗವನ್ನು ಉದ್ಯಾನ ಮತ್ತು ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಯ ಸುಪರ್ದಿಗೆ ನೀಡಿದ್ದಾರೆ. ಅದರಂತೆ ಬಡಾವಣೆಯಲ್ಲಿ ವಿವಿಧ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣದ ನಂತರ ಬಡಾವಣೆ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರು. ಇದರಿಂದ ಉತ್ತರ ಭಾಗದಲ್ಲಿರುವ ತಮ್ಮ ಆಸ್ತಿ ಪ್ರವೇಶಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ತಡೆಗೋಡೆಯನ್ನು ತೆರವುಗೊಳಿಸಲು ನಿರ್ದೇಶಿಸಬೇಕು. ತಮ್ಮ ಜಮೀನಿಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅಡ್ಡಿಪಡಿಸುವುದಕ್ಕೆ ಪಬ್ಬಾರೆಡ್ಡಿಗೆ ಅಧಿಕಾರವಿಲ್ಲ ಎಂಬುದಾಗಿ ಘೋಷಿಸಬೇಕು ಉಪಕಾರ್ ರೆಸಿಡೆನ್ಸಿ ಪರ ವಕೀಲರು ಮನವಿ ಮಾಡಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠ, ಅನುಮೋದಿತ ಬಡಾವಣೆಯಲ್ಲಿ ಸಾರ್ವಜನಿಕರ ಪ್ರವೇಶ ಮಾಡಲು ಮತ್ತು ಹೊರಹೋಗುವ ಹಕ್ಕಿದೆ. ಸಾರ್ವಜನಿಕರ ರಸ್ತೆಗಳ ಬಳಕೆಯನ್ನು ತಡೆಯಲು ಪಬ್ಬಾ ರೆಡ್ಡಿ ಅವರಿಗೆ ಸಾಧ್ಯವಿಲ್ಲ ಎಂದು 2022ರ ನ. 29 ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪಬ್ಬಾರೆಡ್ಡಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ಕಿರಿಯ ಶ್ರೇಣಿ ವೃಂದದ ಅಧಿಕಾರಿಗೆ ಹಿರಿಯ ಶ್ರೇಣಿಗೆ ಬಡ್ತಿ: ಸಕಾರಣ ನೀಡಬೇಕೆಂದ ಹೈಕೋರ್ಟ್