ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪ ಸಂಬಂಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ವಿಚಾರಣೆ ನಡೆಸಿದ್ದ ಕ್ರಮ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಸಂಬಂಧ ಹಾಲಿ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಶಿವಾಜಿನಗರ ಠಾಣೆ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಶಿವಾಜಿನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ದಾಖಲಿಸಿದ್ದ ಖಾಸಗಿ ದೂರು ಮತ್ತು ಆ ಕುರಿತ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಯು.ಟಿ. ಖಾದರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಇದೇ ಪ್ರಕರಣ ಸಂಬಂಧ, ಈ ಹಿಂದೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರ ವಿರುದ್ಧ ಶಿವಾಜಿ ನಗರ ಠಾಣೆ ಪೊಲೀಸರು ದಾಖಲಿಸಿದ್ದ ದೂರು ರದ್ದುಪಡಿಸಿ ಹೈಕೋರ್ಟ್, 2023ರ ಜುಲೈ 7ರಂದು ಆದೇಶಿಸಿತ್ತು. ಅದೇ ಆದೇಶವನ್ನು ಆಧರಿಸಿ ಯು.ಟಿ. ಖಾದರ್ ಅವರ ವಿರುದ್ಧದ ಪ್ರಕರಣವನ್ನೂ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ 2022ರ ಜೂನ್ 16 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ , ಯು.ಟಿ. ಖಾದರ್ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಶಿವಾಜಿನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಖಾಸಗಿ ದೂರು ದಾಖಲಿಸಿದ್ದರು.
ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸುವುದನ್ನು ಕಡ್ಡಾಯಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಉಲ್ಲಂಘಿಸಿ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ನಡೆಸಲು ಯಾವುದೇ ಅನುಮತಿ ಪಡೆದಿಲ್ಲ ಎಂದು 2022ರ ಜೂನ್ 16ರಂದು ದಾಖಲಿಸಿದ ಖಾಸಗಿ ದೂರಿನಲ್ಲಿ ದೂರುದಾರರು ಆರೋಪಿಸಿದ್ದರು. ಈ ದೂರು ರದ್ದುಪಡಿಸಲು ಕೋರಿ ಖಾದರ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಸ್ವಾಮೀಜಿಗಳು ನ್ಯಾಯಾಲಯಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದರೆ ನ್ಯಾಯಮೂರ್ತಿಗಳು ಏನು ಮಾಡಬೇಕು?: ಹೈಕೋರ್ಟ್