ಬೆಂಗಳೂರು: ಭ್ರೂಣಲಿಂಗ ಪತ್ತೆ ನಿಷೇಧಕ್ಕೆ ಸಂಬಂಧಿಸಿದಂತೆ ‘ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯ್ದೆ-1994’ ರ ಅಡಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಸೂಚಿತ ಸಕ್ಷಮ ಪ್ರಾಧಿಕಾರದ ಅಧಿಕಾರಿ ದಾಖಲಿಸಿದ ದೂರುಗಳನ್ನು ಮಾತ್ರವೇ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಗೋಕಾಕ್ನ ಖಾಸಗಿ ಆಸ್ಪತ್ರೆ ಹಾಗೂ ಅದರ ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, 1994ರ ಕಾಯ್ದೆ ಪ್ರಕಾರ ಭ್ರೂಣ ಲಿಂಗ ಪತ್ತೆ ಆರೋಪದಡಿ ದೂರು ದಾಖಲಿಸಲು ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳು ಸಕ್ಷಮ ಪ್ರಾಧಿಕಾರ (ಅಧಿಕಾರಿ) ಆಗಿರುತ್ತಾರೆ. ಸೆಕ್ಷನ್ 28ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ದಾಖಲಿಸುವ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ತಾಲೂಕು ಆರೋಗ್ಯಾಧಿಕಾರಿ ದಾಖಲಿಸಿರುವ ದೂರು ಕಾನೂನು ಬಾಹಿರವಾಗಿದೆ. ಪ್ರಕರಣ ಸಂಬಂಧ ಗೋಕಾಕ್ ಪ್ರಧಾನ ಸಿವಿಲ್ ಮತ್ತು ಜೆಎಫ್‌ಎಂಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.