ಕರ್ನಾಟಕ

karnataka

ETV Bharat / state

ಕಾರ್ಮಿಕರ ಜೋಪಡಿ ತೆರವು ವಿಚಾರ: ಸೂಕ್ತ ಪುನರ್ವಸತಿ ಕಲ್ಪಿಸಲು ಹೈಕೋರ್ಟ್ ತಾಕೀತು

ಕಾರ್ಮಿಕರ ಜೋಪಡಿಗಳನ್ನು ಬಾಂಗ್ಲಾ ವಲಸಿಗರೆಂದು ಭಾವಿಸಿ ತೆರವು ಮಾಡಿದ ಪ್ರಕರಣದಲ್ಲಿ ಪುನರ್ವಸತಿ ಕಲ್ಪಿಸುವ ಸಂಬಂಧ ಉತ್ತಮ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

highcourt
highcourt

By

Published : Sep 24, 2020, 7:15 PM IST

ಬೆಂಗಳೂರು:ನಗರದ ಮಹದೇವಪುರ ವಲಯದ ತೂಬರಹಳ್ಳಿ ಮತ್ತು ಕುಂದಲಹಳ್ಳಿಗಳಲ್ಲಿ ವಾಸವಿದ್ದ ಕಾರ್ಮಿಕರ ಜೋಪಡಿಗಳನ್ನು ಬಾಂಗ್ಲಾ ವಲಸಿಗರೆಂದು ಭಾವಿಸಿ ತೆರವು ಮಾಡಿದ ಪ್ರಕರಣದಲ್ಲಿ ಪುನರ್ವಸತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಸಿದ್ದಪಡಿಸಿದ್ದ ಯೋಜನೆ ತಿರಸ್ಕರಿಸಿರುವ ಹೈಕೋರ್ಟ್, ಉತ್ತಮ ಯೋಜನೆ ರೂಪಿಸುವಂತೆ ತಾಕೀತು ಮಾಡಿದೆ.

ಈ ಕುರಿತು ಪೀಪಲ್ಸ್ ಫಾರ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಪುನರ್ವಸತಿ ಯೋಜನೆ ಸಂಬಂಧ ಸಿದ್ದಪಡಿಸಿದ್ದ ವರದಿಯನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

ವರದಿ ಪರಿಶೀಲಿಸಿದ ಪೀಠ, ಆನೇಕಲ್ ಬಳಿ ಪುನರ್ವಸತಿ ಕಲ್ಪಿಸುವುದಾಗಿ ವರದಿ ನೀಡಿದ್ದೀರಿ. ಅದೂ ಒಂದು ವರ್ಷದ ಮಟ್ಟಿಗೆ ಮಾತ್ರ 10*10 ಅಳತೆಯ ತಾತ್ಕಾಲಿಕ ಶೆಡ್ ನೀಡುವುದಾಗಿ ಹೇಳಿದ್ದೀರಿ. ಇದರಿಂದ ಕಾರ್ಮಿಕರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂದು ಪ್ರಶ್ನಿಸಿತು. ಜೊತೆಗೆ, ಸೂರು ಕಳೆದುಕೊಂಡಿರುವ ಕಾರ್ಮಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಉತ್ತಮ ಯೋಜನೆ ರೂಪಿಸಿಕೊಂಡು ಬನ್ನಿ ಎಂದು ತಾಕೀತು ಮಾಡಿ, ವಿಚಾರಣೆಯನ್ನು ಅಕ್ಟೊಬರ್ 9ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರಾದ ಕ್ಲಿಫ್ಚನ್ ರೋಜಾರಿಯೋ ವಾದಿಸಿ, ಕಾರ್ಮಿಕರು ವಾಸವಿದ್ದ ಜಾಗದಲ್ಲಿಯೇ ಅವರಿಗೆ ಪುನರ್​ವಸತಿ ಕಲ್ಪಿಸಬೇಕು. ಆದರೆ ಸರ್ಕಾರ ಆನೇಕಲ್ ಬಳಿಯ ಜಿಗಣಿ ಸಮೀಪ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದೆ. ಕಾರ್ಮಿಕರು ಕೆಲಸಕ್ಕೆ ಹೋಗವ ಜಾಗದಲ್ಲಿ ಸೂರು ಕೊಡುವ ಬದಲಿಗೆ ಮತ್ತೆಲ್ಲೋ ದೂರದಲ್ಲಿ ಕೊಟ್ಟರೆ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಜತೆಗೆ 1 ವರ್ಷ ಮಾತ್ರ ಅಲ್ಲಿರಬಹುದು ಎಂದು ಹೇಳಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದು ಆಕ್ಷೇಪಿಸಿದರು.

ಸರ್ಕಾರ ಸಲ್ಲಿಸಿದ ವರದಿ:ಕಳೆದ ವರ್ಷ ಅಕ್ರಮವಾಗಿ ತೆರವುಗೊಂಡ ಜೋಪಡಿ ನಿವಾಸಿಗಳಿಗೆ ಹೈಕೋರ್ಟ್ ಆದೇಶದ ಮೇರೆಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಅದರಂತೆ ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಗುಡ್ಡೇನಹಳ್ಳಿ ಸಮೀಪದ ಸರ್ವೆ ನಂಬರ್ 23ರಲ್ಲಿ 2 ಎಕರೆ ಜಾಗ ಗುರುತಿಸಿದ್ದು, ಆ ಜಾಗದಲ್ಲಿ 10*10 ಅಳತೆಯ ನಿವೇಶನದಲ್ಲಿ 245 ತಾತ್ಕಾಲಿಕ ಶೆಡ್ ಗಳನ್ನು ತಲಾ 29 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಡಲಾಗುತ್ತದೆ. ತೆರವು ಸಂದರ್ಭದಲ್ಲಿ ಆಗಿರುವ ನಷ್ಟಕ್ಕೆ ಪ್ರತಿ ಕುಟುಂಬಕ್ಕೆ 14,100 ರೂಪಾಯಿ ಪರಿಹಾರ ಕೊಡಲಾಗುವುದು. ಇನ್ನು ಸರ್ಕಾರ ನೀಡುವ ಶೆಡ್ ಗಳು ಒಂದು ವರ್ಷದ ಮಟ್ಟಿಗೆ ತಾತ್ಕಾಲಿಕವಾಗಿದ್ದು, ವರ್ಷದ ಬಳಿಕ ಕಾರ್ಮಿಕರೇ ಸೂಕ್ತ ನೆಲೆ ಕಂಡುಕೊಳ್ಳಬೇಕು ಎಂದು ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ.

ABOUT THE AUTHOR

...view details