ಕರ್ನಾಟಕ

karnataka

By

Published : Feb 3, 2021, 10:51 PM IST

ETV Bharat / state

ಪರಿಸರ ಸಂರಕ್ಷಣೆ ಕಾಯ್ದೆ ಹಿಂದೆ ವಿದೇಶಿ ಕೈವಾಡ ಆರೋಪ: ದಂಡ ಪಾವತಿಸಲು ಹೈಕೋರ್ಟ್ ಸೂಚನೆ

ನೂರು ಕಿ.ಮೀ.ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ (ಇಐಎ) ಅನ್ವಯಿಸದಿರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ನಡೆಸಿದೆ.

High Court
ಹೈಕೋರ್ಟ್

ಬೆಂಗಳೂರು: ಪರಿಸರ ಸಂರಕ್ಷಣೆ ಕಾಯ್ದೆಯನ್ನು ವಿದೇಶಿ ಪ್ರಭಾವಕ್ಕೆ ಒಳಗಾಗಿ ರೂಪಿಸಲಾಗಿದೆ ಎಂದು ಆಕ್ಷೇಪಾರ್ಹ ಹೇಳಿಕೆ ಸಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಲು ತೀರ್ಮಾನಿಸಿರುವ ಹೈಕೋರ್ಟ್, ದಂಡದ ಹಣವನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ಪಾವತಿಸುವಂತೆ ಸೂಚಿಸಿದೆ.

ನೂರು ಕಿ.ಮೀ.ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ (ಇಐಎ) ಅನ್ವಯಿಸದಿರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಹಿಂದಿನ ವಿಚಾರಣೆ ವೇಳೆ ಕಾಯ್ದೆ ರೂಪಿಸಿರುವುದರ ಹಿಂದೆ ವಿದೇಶಿ ಪ್ರಭಾವವಿದೆ ಎಂದು ಆಕ್ಷೇಪಾರ್ಹ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಇಂತಹ ಹೇಳಿಕೆ ಸಲ್ಲಿಸಿರುವುದರ ಹಿಂದಿನ ಉದ್ದೇಶವನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿದ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ನಿರ್ದೇಶಿಸಿತ್ತು.

ಓದಿ:ಹೈಕೋರ್ಟ್ ಆಕ್ಷೇಪದ ಬಳಿಕ ಜಿಐಬಿ ರಕ್ಷಣೆಗೆ ತಜ್ಞರ ಸಮಿತಿ ಪುನರ್ ರಚಿಸಿದ ಸರ್ಕಾರ

ಈ ಸಂಬಂಧ ಪ್ರಾಧಿಕಾರದ ಪರ ಹಿರಿಯ ವಕೀಲರು ನೀಡಿದ ಸಮಜಾಯಿಷಿಗಳು ನ್ಯಾಯಾಲಯಕ್ಕೆ ಒಪ್ಪಿಗೆಯಾಗಲಿಲ್ಲ. ಹೀಗಾಗಿ ಎನ್ಎಚ್ಎಐಗೆ ದಂಡ ವಿಧಿಸುವುದನ್ನು ಖಚಿತಪಡಿಸಿದ ಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಸ್ಥಾನಮಾನಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ದಂಡವನ್ನು ದೇಣಿಗೆ ರೂಪದಲ್ಲಿ ಪಾವತಿಸಲಿ. ಎಷ್ಟು ಪಾವತಿಸಬೇಕು, ಯಾರಿಗೆ ಪಾವತಿಸಬೇಕು ಎಂಬುದನ್ನು ನ್ಯಾಯಾಲಯ ಸೂಚಿಸುವುದಿಲ್ಲ. ಆದರೆ, ಪಾವತಿಸುವ ಮೊತ್ತ ಸೂಕ್ತವೆನ್ನಿಸದಿದ್ದರೆ ನ್ಯಾಯಾಲಯವೇ ಎಷ್ಟು ದಂಡ ವಿಧಿಸಬೇಕೆಂಬುದನ್ನು ನಿರ್ಧರಿಸಲಿದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details