ಬೆಂಗಳೂರು :ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ರಾಮನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಅಧೀನ ಕಾರ್ಯದರ್ಶಿ, ಕೆಎಸ್‌ಪಿಸಿಬಿ ಮುಖ್ಯಸ್ಥರು, ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯ ಜಿ.ಮರಿಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದಿಸಿ, ಕೆಎಸ್‌ಪಿಸಿಬಿ ಮುಖ್ಯಸ್ಥರು ಹಾಗೂ ಸದಸ್ಯರ ನೇಮಕಾತಿ ಸಂಬಂಧಪಟ್ಟಂತೆ ಸರ್ಕಾರ ಮಾರ್ಗಸೂಚಿ ರಚಿಸಿತ್ತು. ಆದರೆ, ಸದಸ್ಯ ಹಾಗೂ ಅಧ್ಯಕ್ಷರ ವಿದ್ಯಾರ್ಹತೆ ಕುರಿತ ಮಾರ್ಗಸೂಚಿಯನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೆಎಸ್‌ಪಿಸಿಬಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರನ್ನು ನೇಮಕ ಮಾಡಬೇಕಾದರೆ, ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಸರ್ಕಾರಕ್ಕೆ 2020ರ ಅ.8ರಂದು ಮಧ್ಯಂತರ ಆದೇಶ ನೀಡಿದೆ.