ಬೆಂಗಳೂರು:ಲಾಕ್ಡೌನ್ ಪರಿಣಾಮ ಕಾನೂನು ಪದವಿಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗೆ ತೊಡಕಾಗಿದ್ದು, ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿವಿಯನ್ನು (ಕೆಎಸ್ಎಲ್.ಯು) ಪ್ರತಿವಾದಿಯನ್ನಾಗಿ ಸೇರಿಸುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಬೆಂಗಳೂರು ವಿವಿಯ 5 ವರ್ಷದ ಕಾನೂನು ಪದವಿಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇೃತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಭಾರತೀಯ ವಕೀಲರ ಪರಿಷತ್ ಪರ ವಕೀಲರು ವಾದಿಸಿ, ಯುಜಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಹಾಗಿದ್ದೂ ಕಾನೂನು ವಿದ್ಯಾರ್ಥಿಗಳ ಅಂತಿಮ ಸೆಮಿಸ್ಟರ್ ಪ್ರಾಯೋಗಿಕ ಪರೀಕ್ಷೆಗೆ ಪರಿಹಾರ ಕಂಡುಕೊಳ್ಳಲು ಬಿಸಿಐ ಉಪ ಸಮಿತಿ ರಚಿಸಿದೆ. ಆದರೆ, ಮುಂದಿನ ಸೋಮವಾರ ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಸುಪ್ರೀಂಕೋರ್ಟ್ ಈ ವಿಚಾರವನ್ನು ಪರಿಗಣಿಸದಿದ್ದರೆ ಭಾರತೀಯ ವಕೀಲರ ಪರಿಷತ್ತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. ಜತೆಗೆ ರಾಜ್ಯದಲ್ಲಿ ಮತ್ತಿನ್ಯಾವ ಕಾನೂನು ವಿವಿಗಳಿವೆ ಎಂದು ಪ್ರಶ್ನಿಸಿತು.
ವಕೀಲರು ಉತ್ತರಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವಿದ್ದು, ಒಟ್ಟು 216 ಕಾಲೇಜುಗಳು, ವಿವಿಯಿಂದ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಹಾಗಿದ್ದರೆ ವಿವಿಯನ್ನೂ ಪ್ರತಿವಾದಿಯಾಗಿ ಸೇರಿಸಿ ಎಂದು ಸೂಚಿಸಿ ಆಗಸ್ಟ್ 11ಕ್ಕೆ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ಲಾಕ್ಡೌನ್ ಪರಿಣಾಮ ಅಂತಿಮ ಸೆಮಿಸ್ಟರ್ನ ಪ್ರಾಯೋಗಿಕ ಪರೀಕ್ಷೆ ನಡೆಸುವುದು ಸಾಧ್ಯವಾಗಿಲ್ಲ. ಅಂತೆಯೇ, ಮೂಟ್ ಕೋರ್ಟ್ ಪ್ರಾಕ್ಟೀಸ್ ಸೇರಿದಂತೆ ಹಲವು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು ಎಂದು ಕೋರಿ ಬೆಂಗಳೂರು ವಿವಿಯ 5 ವರ್ಷಗಳ ಕಾನೂನು ಪದವಿಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.