ಬೆಂಗಳೂರು : ನೌಕರರಿಗೆ ಉದ್ಯೋಗಕ್ಕೆ ಸೇರಿದಾಗ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆ ಸೇವೆ ಕಾಯಂ ಆದೇಶ ಹೊರಡಿಸಿದಲ್ಲಿ ಮಾತ್ರ ಕಾಯಂ ಆಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಡಿಕೇರಿಯ ವಿರಾಜಪೇಟೆಯ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಮಹಿಳೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಉದ್ಯೋಗಿ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಸೇವೆಯಲ್ಲಿ ಮುಂದುವರಿಯಬಹುದು. ಆದರೆ ಅವರ ಸೇವೆ ಸಹಜವಾಗಿಯೇ ಕಾಯಂ ಆಗುವುದಿಲ್ಲ. ಸೇವೆ ಕಾಯಂ ಆಗಬೇಕಾದರೆ ಅದಕ್ಕೆ ಉದ್ಯೋಗ ನೀಡುವ ಸಂಸ್ಥೆ ಪ್ರತ್ಯೇಕ ಆದೇಶ ಹೊರಡಿಸಬೇಕು. ಏಕೆಂದರೆ ನಿಯಮಗಳಲ್ಲಿ ಪ್ರೊಬೆಷನರಿ ಮುಗಿದ ಬಳಿಕ ಸಹಜವಾಗಿಯೇ ಸೇವೆ ಕಾಯಂ ಆಗುತ್ತದೆಂದು ಉಲ್ಲೇಖಿಸಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಜತೆಗೆ, ಉದ್ಯೋಗಿಯನ್ನು ಪ್ರೊಬೇಷನರಿಯಲ್ಲಿಡುವುದಕ್ಕೆ ಎರಡು ಕಾರಣಗಳಿವೆ. ಒಂದು ಉದ್ಯೋಗಿ ಆ ಹುದ್ದೆಗೆ ಸೂಕ್ತ ಹೌದೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡಲು, ಎರಡು ಉದ್ಯೋಗಿ ಕೂಡ ತಾನು ಆ ಹುದ್ದೆಗೆ ಸೂಕ್ತನೇ ಎಂಬುದನ್ನು ಪರಿಶೀಲಿಸಿಕೊಳ್ಳಲು. ಪ್ರೊಬೆಷನರಿ ಅವಧಿಯಲ್ಲಿ ಇಬ್ಬರಿಗೂ ಆಯ್ಕೆಗಳಿರುತ್ತವೆ ಎಂದು ಪೀಠ ಹೇಳಿದೆ.