ಬೆಂಗಳೂರು:ಕೊರೊನಾ ನಡುವೆಯೂ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್ಗಳು ಜೂ. 1ರಿಂದ ಕಾರ್ಯಾರಂಭ ಮಾಡುತ್ತಿದ್ದು ಹಲವು ಸಣ್ಣಪುಟ್ಟ ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಅಡ್ಡಿಗಳು ಎದುರಾಗಿವೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದು, ಆರೋಪಿಗಳ ಹೇಳಿಕೆ ದಾಖಲಿಸುವುದು, ಭದ್ರತಾ ಖಾತರಿ ಒದಗಿಸುವುದು, ರಿಮ್ಯಾಂಡ್ ಪ್ರಕ್ರಿಯೆ ಮತ್ತು ಲೋಕ ಅದಾಲತ್ ನಡೆಸುವ ವಿಚಾರದಲ್ಲಿ ಕಾನೂನಾತ್ಮಕ ಮತ್ತು ತಾಂತ್ರಿಕ ತೊಡಕುಗಳು ಎದುರಾಗಿವೆ. ಇವುಗಳಿಗೆ ಸೂಕ್ತ ಪರಿಹಾರ ಹುಡುಕಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲು ಅನುಕೂಲವಾಗುವಂತೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಹೈಕೋರ್ಟ್, ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಿತ್ತು.
ಅದರಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವಕೀಲರ ಪರಿಷತ್ತು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತು.
ಈ ವೇಳೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಗತ್ಯ ಸಲಹೆ ನೀಡಲು ಅಮಿಕಸ್ ಕ್ಯೂರಿಗಳಾಗಿ ಹಾಜರಾಗುವಂತೆ ಹಿರಿಯ ವಕೀಲರಾದ ಉದಯ ಹೊಳ್ಳ ಹಾಗೂ ಸಿ.ವಿ. ನಾಗೇಶ್ ಅವರಿಗೆ ಪೀಠ ಮನವಿ ಮಾಡಿತು. ಹಾಗೆಯೇ ಜಿಲ್ಲಾ ಕೋರ್ಟ್ ಕಲಾಪಗಳ ನಿರ್ವಹಣೆಗೆ ರೂಪಿಸಿರುವ ಮಾರ್ಗಸೂಚಿಗಳ ಪ್ರತಿಯನ್ನು ಇಬ್ಬರು ಹಿರಿಯ ವಕೀಲರಿಗೆ ತಲುಪಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ಸೂಚನೆ ನೀಡಿ ವಿಚಾರಣೆಯನ್ನು ಜೂ. 1ಕ್ಕೆ ಮುಂದೂಡಿತು.