ಬೆಂಗಳೂರು: ವಕೀಲರ ಕಚೇರಿಯಲ್ಲಿ ದುಡಿಯುತ್ತಿರುವ ಗುಮಾಸ್ತರು ಅಕಾಲಿಕ ನಿಧನರಾದಗ ಅವರ ಕುಟುಂಬದ ಸದಸ್ಯರ ಕಲ್ಯಾಣಕ್ಕಾಗಿ ಅಗತ್ಯವಿರುವ ಯೋಜನೆ ರೂಪಿಸುವಂತೆ ರಾಜ್ಯ ವಕೀಲರ ಪರಿಷತ್ ಹಾಗೂ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ಮಟ್ಟದ ವಕೀಲರ ಕ್ಲರ್ಕ್‌ಗಳ ಸಂಘದ ಅಧ್ಯಕ್ಷ ಡಿ.ಶಿವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ರಾಜ್ಯ ಕಾನೂನು ಇಲಾಖೆಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ವಕೀಲರ ನೋಂದಾಯಿತ ಕ್ಲರ್ಕ್‌ಗಳ ಕಲ್ಯಾಣ ನಿಧಿ ಸಮಿತಿಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?:ವಕೀಲರ ಕಚೇರಿಯಲ್ಲಿ ದುಡಿಯುವ ಕ್ಲರ್ಕ್‌ಗಳ ಕಲ್ಯಾಣ ನಿಧಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಯೋಜನೆ ರೂಪಿಸಬೇಕು ಎಂದು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ 2008ರ ಏಪ್ರಿಲ್ 16ರಂದು ನೀಡಿರುವ ಆದೇಶದಂತೆ ಯೋಜನೆ ರೂಪಿಸಬೇಕು ಎಂದು ಕೋರಲಾಗಿದೆ.
ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು 2022ರ ಮಾರ್ಚ್ 15ರಂದು ನೀಡಿರುವ ತೀರ್ಪಿನ ಅನುಸಾರ ಪರಿಣಾಮಕಾರಿ ಯೋಜನೆ ರೂಪಿಸಲು ಮತ್ತು ಅವುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಕಾನೂನು ಇಲಾಖೆ ಮತ್ತು ರಾಜ್ಯ ವಕೀಲರ ಪರಿಷತ್‌ಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಪರಿಗಣಿಸಿ ಶೀಘ್ರವೇ ಸೂಕ್ತ ಯೋಜನೆ ರೂಪಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.