ಬೆಂಗಳೂರು :ಹಣ ಪಡೆದು ಹಿಂದಿರುಗಿಸದೆ ವಂಚಿಸಿದ ಆರೋಪ ಪ್ರಕರಣದಿಂದ ಸಚಿವ ಬಿ.ಶ್ರೀರಾಮುಲು ಅವರನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆಗೆ ನ್ಯಾಯಾಲಯಕ್ಕೆ ಅಗತ್ಯ ಸಲಹೆ ಹಾಗೂ ನೆರವು ಕಲ್ಪಿಸಲು ವಕೀಲ ಮೂರ್ತಿ ಡಿ.ನಾಯಕ್ ಅವರನ್ನು ಅಮೈಕಸ್ ಕ್ಯೂರಿ ಆಗಿ ಹೈಕೋರ್ಟ್ ನೇಮಿಸಿದೆ.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ದೂರುದಾರ ಎಲ್.ಸೋಮಣ್ಣ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಕಳೆದ ವಿಚಾರಣೆ ವೇಳೆ ಮೇಲ್ಮನವಿಯಲ್ಲಿ 2ನೇ ಪ್ರತಿವಾದಿಯಾಗಿರುವ ಸಚಿವ ಬಿ.ಶ್ರೀರಾಮುಲು ಅವರಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಆದರೆ, ವಕೀಲರು ವಿಚಾರಣೆಗೆ ಹಾಜರಾಗಲಿಲ್ಲ.
ಇದನ್ನು ಪರಿಗಣಿಸಿದ ಪೀಠ, ಸಚಿವರ ಪರ ವಕೀಲರು ವಿಚಾರಣೆಗೆ ಹಾಜರಾಗಿಲ್ಲ. ಸಚಿವರ ಪರ ವಕೀಲರು ಪ್ರತಿನಿಧಿಸದಿದ್ದರೂ ವಿಚಾರಣೆಯನ್ನು ತಡೆಹಿಡಿಯುವುದು ಬೇಡ. ಮೇಲ್ಮನವಿಯಲ್ಲಿ ಪ್ರತಿವಾದಿಯಾಗಿರುವ ಬಳ್ಳಾರಿ ಪೊಲೀಸರ ಪರವಾಗಿ ಸರ್ಕಾರಿ ಅಭಿಯೋಜಕರು ವಾದಿಸುತ್ತಾರೆ.
ಆದ್ದರಿಂದ ನ್ಯಾಯಾಲಯಕ್ಕೆ ಪ್ರಕರಣ ಕುರಿತು ಅಗತ್ಯ ಸಲಹೆ ಹಾಗೂ ನೆರವು ನೀಡಲು ಅಮಿಕಸ್ ಕ್ಯೂರಿಯನ್ನು ನೇಮಿಸಬಹುದು ಎಂದು ಅಭಿಪ್ರಾಯಪಟ್ಟು, ವಕೀಲ ಮೂರ್ತಿ ಡಿ.ನಾಯಕ್ ಅವರನ್ನು ಅಮೈಕಸ್ ಕ್ಯೂರಿ ಆಗಿ ನೇಮಿಸಿ, ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿತು.