ಬೆಂಗಳೂರು: ಕೊಲೆ ಪ್ರಕರಣದಲ್ಲಿ 10 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ವಿವಾಹವಾಗುವುದಕ್ಕಾಗಿ 15 ದಿನಗಳ ಕಾಲ ನೀಡಿದ್ದ ಪೆರೋಲ್ನ್ನು ಹೈಕೋರ್ಟ್ ಮತ್ತೆ 60 ದಿನಗಳ ಕಾಲ ವಿಸ್ತರಣೆ ಮಾಡಿದೆ. ಅಪರಾಧಿ ಆನಂದ್ನನ್ನು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯತಮೆ ನೀತಾ ಮತ್ತು ಆತನ ತಾಯಿ ವಿವಾಹವಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪಪೀಠ ಮತ್ತೊಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ಪೆರೋಲ್ ಅವಧಿಯನ್ನು ಮತ್ತೆ 60 ದಿನಗಳ ಕಾಲ ವಿಸ್ತರಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಪೀಠ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮತ್ತು ಅಪರಾಧಿ ಆನಂದ್ ವಿವಾಹವಾಗಿರುವ ಸಂಬಂಧ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದೆ. ಆದರೆ, ಮಧುಚಂದ್ರ ಸೇರಿದಂತೆ ಕೆಲವು ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಪೆರೋಲ್ ಅವಧಿ ವಿಸ್ತರಿಸಿದ್ದು, ಮತ್ತೆ ಇದೇ ರೀತಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಸೂಚನೆ ನೀಡಿದೆ.
ಅಲ್ಲದೆ, ಈ ಹಿಂದೆ ನೀಡಲಾಗಿದ್ದ ಷರತ್ತುಗಳು ಮುಂದುವರೆಯಲಿದ್ದು, ಪ್ರತಿ ಭಾನುವಾರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕು ಎಂದು ಸೂಚನೆ ನೀಡಿದೆ. ಈ ಹಿಂದೆ ನೀಡಿದ್ದ ಆದೇಶದಲ್ಲಿ ಜೈಲು ಕೈಪಿಡಿಯ ಸೆಕ್ಷನ್ 636ರ ಸಬ್ ಸೆಕ್ಷನ್ 12ರ ಪ್ರಕಾರ ಅಸಾಧಾರಣ ಸಂದರ್ಭಗಳಲ್ಲಿ ಕೈದಿಗಳಿಗೆ ಪೆರೋಲ್ ನೀಡಲು ಸಂಸ್ಥೆಯ ಮುಖ್ಯಸ್ಥರಿಗೆ ವಿವೇಚನಾಧಿಕಾರವಿದೆ. ಹೀಗಾಗಿ ಅತ್ಯಂತ ಅಪರೂಪದ ಪ್ರಕರಣ ಎಂಬುದಾಗಿ ಪರಿಗಣಿಸಿ ಪೆರೋಲ್ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಪರಾಧಿ 21 ವರ್ಷವಿದ್ದಾಗ ಜೈಲು ಶಿಕ್ಷೆಗೆ ಗುರಿಯಾಗಿದ್ದು, 10 ವರ್ಷ ಶಿಕ್ಷೆ ನಿಗದಿಯಾಗಿದೆ. ಅರ್ಜಿದಾರ ಹೆಣ್ಣು ಮಗಳು ಅಪರಾಧಿಯನ್ನು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದು, ಪೆರೋಲ್ ನೀಡದಿದ್ದಲ್ಲಿ ಅವರ ಜೀವನದ ಪ್ರೀತಿಯನ್ನು ಕಳೆದುಕೊಂಡಂತಾಗಲಿದೆ. ಅರ್ಜಿದಾರರು ಜೈಲಿನಲ್ಲಿರುವ ಕೈದಿಯನ್ನು ಹೊರತುಪಡಿಸಿ ಬೇರೊಬ್ಬರನ್ನು ಒಲ್ಲದ ಮನಸ್ಸಿನಿಂದ ವಿವಾಹವಾಗಬೇಕಾಗುತ್ತದೆ. ಹೀಗಾಗಿ ಕೈದಿಗೆ ಷರತ್ತುಗಳನ್ನು ವಿಧಿಸಿ ತುರ್ತಾಗಿ ಪೆರೋಲ್ ನೀಡಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಜೈಲು ಕೈಪಿಡಿಯಲ್ಲಿ ವಿವಾಹವಾಗಲು ಪೆರೋಲ್ ನೀಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಬೇಡಿಕೆಯನ್ನು ಪುಷ್ಟೀಕರಿಸಬಹುದಾದ ಬಾಂಬೆ ಹೈಕೋರ್ಟ್, ರಾಜಸ್ಥಾನ ಹೈಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠಗಳ ಹಲವು ಆದೇಶಗಳನ್ನು ಉಲ್ಲೇಖಿಸಿ ಪೆರೋಲ್ ಮೇಲೆ ಬಿಡುಗಡೆಗೆ ಸೂಚನೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು:ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ 2015ರ ಆಗಸ್ಟ್ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ (ಘಟನೆ ನಡೆದಾಗ 21 ವರ್ಷ) ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆಗಸ್ಟ್ 17ರಂದು ಬಂಧಿಸಿದ್ದರು. ನಂತರ ಸೆಷನ್ಸ್ ನ್ಯಾಯಾಲಯ 2017ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ನಿಗದಿ ಮಾಡಿತ್ತು. ಈ ನಡುವೆ ಅಪರಾಧಿಯ ಪ್ರಿಯತೆಮೆ ವಿವಾಹವಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕರಿಗಳಿಗೆ ಸೂಚನೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಎನ್ಆರ್ಐಗಳಿಗೆ ನೆಲೆಸಿರುವ ದೇಶದಿಂದಲೇ ಮತಚಲಾಯಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್