ಕರ್ನಾಟಕ

karnataka

ETV Bharat / state

ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ: ಸಂತ್ರಸ್ತೆಯನ್ನು ಮನೆಗೆ ಬಿಟ್ಟು ಹೋಗಿದ್ದ ಆರೋಪಿಯ ವಿರುದ್ಧದ ಪ್ರಕರಣ ರದ್ದು

ಪೋಕ್ಸೋ ಕಾಯ್ದೆಯ ಸೆಕ್ಷನ್ 16ರ ಪ್ರಕಾರ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುವುದು ಎಂದರೇ ಅಪರಾಧ ಮಾಡಲು ಪ್ರಚೋದನೆ ನೀಡುವುದು, ಉದ್ದೇಶಪೂರ್ವಕವಾಗಿ ಕೃತ್ಯಕ್ಕೆ ಸಹಕರಿಸುವುದು, ಬಲವಂತವಾಗಿ ಅಪಹರಿಸಿ ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳುವುದಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

highcourt
ಹೈಕೋರ್ಟ್

By

Published : May 30, 2023, 9:08 PM IST

ಬೆಂಗಳೂರು: ಅತ್ಯಾಚಾರ ಪ್ರಕರಣ ಆರೋಪಿಯ ಸೂಚನೆ ಮೇರೆಗೆ ಅಪ್ರಾಪ್ತ ಸಂತ್ರಸ್ತೆಯನ್ನು ಆಕೆಯ ಅಜ್ಜಿಯ ಮನೆಗೆ ಬಿಟ್ಟು ಹೋಗಿದ್ದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಾರಂಭಿಸಿದ್ದ ಕ್ರಿಮಿನಲ್ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೊಡಗು ಜಿಲ್ಲೆಯ ಪ್ರಸಾದ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸಂತ್ರಸ್ತೆಯ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಅರ್ಜಿದಾರ ಆರೋಪಿಯು ಭಾಗಿಯಾಗಿರುವ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟು ವಿಚಾರಣೆ ಕೈಬಿಟ್ಟಿದೆ. ಅರ್ಜಿದಾರರು, ಅತ್ಯಾಚಾರ ಕೃತ್ಯದ ಬಳಿಕ ಸಂತ್ರಸ್ತೆಯನ್ನು ಆಕೆಯ ಅಜ್ಜಿಯ ಮನೆಗೆ ಬಿಟ್ಟಿದ್ದಾರೆ.

ಇದನ್ನು ಹೊರತು ಪಡಿಸಿ ಇನ್ನಿತರೆ ಯಾವುದೇ ಆರೋಪವು ಅರ್ಜಿದಾರರ ವಿರುದ್ಧ ಇಲ್ಲ. ಅಲ್ಲದೇ, ದೂರುದಾರರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯಂತೆ, ಕೃತ್ಯ ನಡೆದ ಸಂದರ್ಭದಲ್ಲಿ ಅರ್ಜಿದಾರರು ಕಂಡು ಬಂದಿಲ್ಲ. ಘಟನೆ ಬಳಿಕ ಸಂತ್ರಸ್ತೆಯನ್ನು ಮನೆಗೆ ಬಿಟ್ಟಿದ್ದರು ಎಂಬುದಾಗಿ ದಾಖಲಾಗಿದೆ. ಹೀಗಾಗಿ ಆರೋಪಿ ವಿರುದ್ಧದ ವಿಚಾರಣೆಯನ್ನು ಕೈ ಬಿಡುತ್ತಿರುವುದಾಗಿ ಪೀಠ ತಿಳಿಸಿದೆ.

ಪೋಕ್ಸೋ ಕಾಯ್ದೆಯ ಸೆಕ್ಷನ್ 16ರ ಪ್ರಕಾರ ಕುಮ್ಮಕ್ಕು ನೀಡುವುದು ಎಂದರೆ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಅಪರಾಧ ಮಾಡುವುದಕ್ಕಾಗಿ ಪ್ರಚೋದನೆ ನೀಡುವುದು, ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯಕ್ಕೆ ಸಹಾಯ ಮಾಡುವುದು, ಬಲವಂತವಾಗಿ ಅಪಹರಣ ಮಾಡಿ ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳುವುದಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಈ ರೀತಿಯ ಅಭಿಪ್ರಾಯ ಇಲ್ಲವಾಗಿದೆ. ಈ ನಿಟ್ಟಿನದಲ್ಲಿ ಪ್ರಕರಣವನ್ನು ಮುಂದುವರೆಸಿದಲ್ಲಿ ಕಾನೂನಿನ ದುರ್ಬಳಕೆ ಆಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಐಪಿಸಿ 114ರಡಿ ಪ್ರಕರಣ ದಾಖಲಾಗಿದ್ದು, ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡುವು ವ್ಯಕ್ತಿಯು ಕೃತ್ಯ ನಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿರಬೇಕು ಎಂಬುದಾಗಿದೆ. ಆದರೆ, ಘಟನೆ ನಡೆದಾಗ ವ್ಯಕ್ತಿ ಸ್ಥಳದಲ್ಲಿರಲಿಲ್ಲ. ಹೀಗಾಗಿ ಪ್ರಕರಣ ರದ್ದು ಪಡಿಸುತ್ತಿರುವುದಾಗಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ?17 ವರ್ಷದ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದರು. ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿದ್ದರು. ಆ ಬಳಿಕ ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು, ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಅರ್ಜಿದಾರ ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ. ಆದರೆ, ಘಟನೆ ನಡೆದ ಬಳಿಕ ಸಂತ್ರಸ್ತೆಯನ್ನು ಅವರ ಅಜ್ಜಿಯ ಮನೆಗೆ ಬಿಟ್ಟು ಹೋಗಿದ್ದರು. ಆದರೆ, ತನಿಖಾಧಿಕಾರಿಗಳು ಅರ್ಜಿದಾರ ಆರೋಪಿಯ ವಿರುದ್ಧ ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಕ್ಕೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಪ್ರಸಾದ್, ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣವನ್ನು ಕೈಬಿಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳಾಗಿದ್ದಾರೆ. ಅರ್ಜಿದಾರರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಪ್ರಕರಣದ ಮೊದಲ ಆರೋಪಿಯ ಸೂಚನೆ ಮೇರೆಗೆ ಸಂತ್ರಸ್ತೆಯನ್ನು ಆಕೆಯ ಅಜ್ಜಿಯ ಮನೆಗೆ ಬಿಟ್ಟಿದ್ದಾರೆ. ಆದರೆ, ಅರ್ಜಿದಾರರನ್ನು ಪ್ರಕರಣದಲ್ಲಿ ವಿನಾಕಾರಣ ಎಳೆಯಲಾಗಿದೆ. ಅಲ್ಲದೆ, ಸಂತ್ರಸ್ತೆ ಅರ್ಜಿದಾರರ ಹೆಸರನ್ನು ಹೇಳಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಒಪ್ಪೊಕೊಂಡಿದ್ದಾರೆ. ಆದರೂ ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಿ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ರಾಯಚೂರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಿಕಿತ್ಸೆ ಫಲಿಸದೇ ಸಾವು

ABOUT THE AUTHOR

...view details