ಬೆಂಗಳೂರು:ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಮಾ. 11ರಂದು ಹೊರಡಿಸಿರುವ ಅಧಿಸೂಚನೆ ಸಂಬಂಧ ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ನಿರ್ದೇಶನದಿಂದಾಗಿ ಚುನಾವಣೆ ನಡೆದು ಕಳೆದ 17 ತಿಂಗಳಿಂದ ನನೆಗುದಿಗೆ ಬಿದ್ದಿರುವ 58 ನಗರಸಭೆ, 117 ಪುರಸಭೆ ಹಾಗೂ 93 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 268 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬವಾಗಲಿದೆ.
ಹೊಸ ಅಧಿಸೂಚನೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಎಸ್ಟಿ (ಮಹಿಳೆ) ಕೆಟಗರಿಗೆ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ನಗರಸಭೆ ಸದಸ್ಯ ಆಲಂ ಬಾಷಾ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಪಿ.ಬಿ.ಭಜಂತ್ರಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಸಿಂಧನೂರು ನಗರಸಭೆಯ ಅಧ್ಯಕ್ಷ ಹುದ್ದೆಯ ಮೀಸಲಾತಿ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಸಂಬಂಧ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಏ. 1ಕ್ಕೆ ಮುಂದೂಡಿತು.