ಬೆಂಗಳೂರು: ಹಾರಂಗಿ ಜಲಾಶಯದಲ್ಲಿ ತುಂಬಿರುವ ಹೂಳನ್ನು ಹೊರ ತೆಗೆಯಲು 130 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಟೆಂಡರ್ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಹಾರಂಗಿ ಜಲಾಶಯದ ವೈಜ್ಞಾನಿಕ ನಿರ್ವಹಣೆ ಕೋರಿ ಕೊಡಗಿನ ನಂದ ಬೆಳ್ಳಿಯಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕಾವೇರಿ ನೀರಾವರಿ ನಿಗಮದ ಪರ ವಕೀಲರು ವಾದ ಮಂಡಿಸಿ, ಕಳೆದ ಜನವರಿಯಲ್ಲಿ ಜಲಾಶಯದ ಹೂಳೆತ್ತುವ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು, ಆದರೆ ತಾಂತ್ರಿಕವಾಗಿ ಯಾರೂ ಅರ್ಹರು ಸಿಗದ ಕಾರಣ, ಅದನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದರು. ಅಲ್ಲದೇ, ಹೊಸ ಟೆಂಡರ್ ಅನ್ನು ಜೂ.14ರಂದು ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಜೂನ್ 29ಕ್ಕೆ ಕೊನೆಯ ದಿನಾಂಕವಾಗಿದೆ. ಆನಂತರ ಟೆಂಡರ್ ಅಂತಿಮಗೊಳಿಸಿ ಆದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.