ಬೆಂಗಳೂರು: ಕಳೆದ ಒಂದು ವಾರದಿಂದ ಸಾಕಷ್ಟು ಕಸರತ್ತು ನಡೆಸಿ ವಿಧಾನಪರಿಷತ್ತಿಗೆ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅತ್ಯಂತ ಮುತುವರ್ಜಿಯಿಂದ ಅಳೆದು-ತೂಗಿ ಸಿದ್ಧಪಡಿಸಿ ಕಳುಹಿಸಿದ್ದ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ.
ಈ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಖಭಂಗ ಉಂಟಾಗಿದ್ದು, ಹೊಸ ಪಟ್ಟಿ ಸಿದ್ಧಪಡಿಸಿ ಕಳಿಸಿಕೊಡುವ ಅನಿವಾರ್ಯತೆ ಎದುರಾಗಿದೆ. ರಾಜ್ಯ ನಾಯಕರು ಕಳಿಸಿಕೊಟ್ಟಿದ್ದ ಪಟ್ಟಿ ಹೈಕಮಾಂಡ್ ನಿಂದ ವಾಪಸಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಟ್ಟಿಯನ್ನು ವಾಪಸ್ ಕಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ.
ನಿನ್ನೆ ರಾತ್ರಿ ನಾಲ್ವರ ಪಟ್ಟಿಯನ್ನ ರವಾನಿಸಿದ್ದ ಕೈನಾಯಕರು, ಅದರಲ್ಲಿ ಅಭ್ಯರ್ಥಿಗಳನ್ನಾಗಿ ಎಂ.ಸಿ. ವೇಣುಗೋಪಾಲ್, ಎಂ.ಆರ್. ಸೀತಾರಾಂ, ನಸೀರ್ ಅಹ್ಮದ್, ಐವಾನ್ ಡಿಸೋಜಾ ಹೆಸರನ್ನ ಕಳಿಸಿದ್ದರು. ಈ ಪಟ್ಟಿ ಬೇಡ, ಬೇರೆ ಪಟ್ಟಿ ಕಳಿಸಿ ಎಂದು ಹೈಕಮಾಂಡ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗ್ತಿದೆ.
ಹೈಕಮಾಂಡ್ನಿಂದ ನಿಷ್ಠಾವಂತ ಕಾರ್ಯಕರ್ತರನ್ನ ಗುರ್ತಿಸಿ ಕಳಿಸುವಂತೆ ಸೂಚನೆ ಬಂದಿರುವ ಈ ಹಿನ್ನೆಲೆ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ಆರಂಭವಾಗಿದೆ. ಮಾಜಿ ಸಚಿವ ಜಮೀರ್ ಅಹ್ಮದ್, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ ಸೇರಿದಂತೆ ಹಿರಿಯರು ಸಭೆ ಸೇರಿದ್ದಾರೆ. ನಿಷ್ಠಾವಂತ ಕಾರ್ಯಕರ್ತರ ಪಟ್ಟಿ ರೆಡಿ ಮಾಡಲು ಚರ್ಚೆ ನಡೆದಿದೆ.