ಬೆಂಗಳೂರು:ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡುವಂತೆ ನಿರ್ದೇಶನ ನೀಡಿದ್ದರೂ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದ್ದು, ವರಿಷ್ಠರ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ.
ಹಿರಿಯರಿಗೆ ಟಿಕೆಟ್ ನೀಡದೆ ಹೊಸಬರಿಗೆ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಟಿಕೆಟ್ ನೀಡುವ ನಿರ್ಧಾರದಿಂದಾಗಿ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವಂತೆ ರಾಜ್ಯ ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್ ಈಶ್ವರಪ್ಪಗೆ ಹೈಕಮಾಂಡ್ ಸಂದೇಶ ರವಾನಿಸಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರ ಪ್ರಕಟಿಸಿದರು. ಆದರೆ ಜಗದೀಶ್ ಶೆಟ್ಟರ್ ಮಾತ್ರ ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆ ವ್ಯಕ್ತಪಡಿಸಿ ಮಾಧ್ಯಮಗೋಷ್ಟಿ ನಡೆಸಿ ನಿರ್ಧಾರ ಪ್ರಕಟಿಸಿದರು.
ಇಂದು ದೆಹಲಿ ಪಯಣ:ಶೆಟ್ಟರ್ ನಿರ್ಧಾರದಿಂದ ಅಸಮಧಾನಗೊಂಡ ಹೈಕಮಾಂಡ್ ನಾಯಕರು ತಕ್ಷಣವೇ ದೆಹಲಿಗೆ ಬರುವಂತೆ ಶೆಟ್ಟರ್ ಗೆ ಬುಲಾವ್ ನೀಡಿದ್ದಾರೆ. ವರಿಷ್ಠರಿಂದ ಬುಲಾವ್ ಬರುತ್ತಿದ್ದಂತೆ ಶೆಟ್ಟರ್ ಇಂದು ನವದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಸದ್ಯ ಶೆಟ್ಟರ್ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಅದೇ ರೀತಿ ಈಶ್ವರಪ್ಪ ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸಿಲ್ಲ. ಇಬ್ಬರು ನಾಯಕರ ಸಮ್ಮತಿಯ ಮೇಲೆ ಬೇರೆ ಅಭ್ಯರ್ಥಿ ಹೆಸರು ಆಯ್ಕೆ ಮಾಡಲಾಗುತ್ತದೆ. ಈಶ್ವರಪ್ಪ ವಿಚಾರದಲ್ಲಿ ಚರ್ಚೆ ಮುಗಿದಿದೆ. ಶೆಟ್ಟರ್ ವಿಚಾರದಲ್ಲಿ ಮಾತುಕತೆ ಬಾಕಿ ಇದೆ. ಹಾಗಾಗಿ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.
ಶೆಟ್ಟರ್, ಈಶ್ವರಪ್ಪ, ಸವದಿ ಜತೆ ಬಿಎಸ್ವೈ ಮಾತುಕತೆ:ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ವಂಚಿತರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಜತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಟಿಕೆಟ್ ಕೈ ತಪ್ಪಿದ್ದರೂ ಬೇಸರಗೊಳ್ಳಬೇಡಿ. ಬೇರೆ ಅವಕಾಶಗಳಿವೆ ಎಂದು ಸಲಹೆ ನೀಡಿದರು. ಈಶ್ವರಪ್ಪಗೂ ಕರೆ ಮಾಡಿ ಮಾತುಕತೆ ನಡೆಸಿದರು. ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮೂವರೂ ನಾಯಕರಿಗೆ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು. ಆದರೆ ಶೆಟ್ಟರ್ಗೆ ಹೈಕಮಾಂಡ್ ಬುಲಾವ್ ಬಂದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ಸು, ಈಶ್ವರಪ್ಪ, ಸವದಿ ಯಡಿಯೂರಪ್ಪ ಭೇಟಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.