ಬೆಂಗಳೂರು:ರಾಜಧಾನಿಯಲ್ಲಿ ಕಳೆದ ಎರಡು ವಾರದಿಂದ ಸುರಿದ ಮಹಾಮಳೆಗೆ ಜನ-ಜೀವನ ಸಂಪೂರ್ಣವಾಗಿ ಅಲ್ಲೋಲ ಕಲ್ಲೋಲವಾಗಿದೆ. ಮಗಳ ಮದುವೆ, ನಿಶ್ಚಿತಾರ್ಥಕ್ಕೆ ತಂದಿದ್ದ ಬೆಲೆ ಬಾಳುವ ರೇಷ್ಮೆ ಸೀರೆ ತೊಯ್ದು ತೊಪ್ಪೆಯಾಗಿವೆ. ಬಂಗಾರದ ಒಡವೆ ಮಳೆಯಲ್ಲಿ ತೇಲಿ ಹೋಗಿವೆ.
ನೀರಿನ ರಭಸಕ್ಕೆ ಮಗು ಕೊಚ್ಚಿ ಹೋಗಿದ್ದು, ಮತ್ತೋರ್ವ ಬಾಲಕ ಜೀವದ ಹಂಗು ತೊರೆದು ಈಜುತ್ತ ಹೋಗಿ ಆತನ ಬದುಕಿಸಿರುವ ಘಟನೆ ನಡೆದಿದೆ. ಇದರ ಮಧ್ಯೆ ರಾಜಕಾಲುವೆಯ ನೀರು ನುಗ್ಗಿ ಮನೆಯ ಎಲ್ಲ ಸಾಮಾನು ಕೈಗೆ ಸಿಗದ ರೀತಿಯಲ್ಲಿ ತೇಲಿ ಹೋಗಿವೆ. ಇವೆಲ್ಲ ಬೆಂಗಳೂರಿನಲ್ಲಿ ನಡೆದ ಆವಾಂತರ. ಇದರ ಮಧ್ಯೆ ಬಡವರ ಗೋಳು ಕೇಳುವವರು ಇಲ್ಲದಂತಾಗಿದೆ.
ಮಳೆಗೆ ಕೊಚ್ಚಿ ಹೋದ ಮನೆ
ಶೌಚಾಲಯದಲ್ಲಿ ಜೀವನ ನಡೆಸುತ್ತಿರುವ ಗೀತಾ ಭಾರೀ ಮಳೆಗೆ ಬನ್ನೇರುಘಟ್ಟ ರೋಡ್ನ ಲಕ್ಕಸಂದ್ರ ಸ್ಲಮ್ನಲ್ಲಿರುವ 71 ವರ್ಷದ ರಶ್ಮಿಯಮ್ಮ ಅವರ ಮನೆ ಬಿದ್ದು ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ರಶ್ಮಿಯಮ್ಮ ಜೊತೆ ಅವರ ಮಗಳು, ಸೊಸೆ ಮತ್ತು ನಾಲ್ವರು ಮೊಮ್ಮಕ್ಕಳು 10X 10 ಅಡಿ ಮನೆಯಲ್ಲಿ ವಾಸವಾಗಿದ್ದರು. ಅಕ್ಟೋಬರ್ 10 ರ ರಾತ್ರಿ ಸುರಿದ ಮಹಾಮಳೆಗೆ ಇವರ ಮನೆ ಸಂಪೂರ್ಣವಾಗಿ ಬಿದ್ದು ಹೋಗಿದೆ. ಹೀಗಾಗಿ ಬೇರೆ ದಾರಿ ಕಾಣದೇ ಮನೆಯಿಂದ ಸ್ವಲ್ಪ ದೂರದಲ್ಲಿ ವಿಲ್ಸನ್ ಗಾರ್ಡನ್ ಹತ್ತಿರದ ಸಾರ್ವಜನಿಕ ಶೌಚಾಲಯದಲ್ಲಿ ತಮ್ಮ ಅಳಿದುಳಿದ ಸಾಮಾನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸಾವನ್ನಪ್ಪಿದ ರಶ್ಮಿಯಮ್ಮ
ಕಳೆದ 15 ವರ್ಷಗಳಿಂದ ವಾಸವಾಗಿದ್ದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಕಾರಣ ರಶ್ಮಿಯಮ್ಮ ಲಾಲಾಜಿನಗರದಲ್ಲಿರುವ ಬಿಬಿಎಂಪಿ ವಾರ್ಡ್ ಕಚೇರಿಗೆ ಸಹಾಯಕ್ಕೆ ಅನೇಕ ಸಲ ಅಡ್ಡಾಡಿದ್ದಾರೆ. ಆದರೆ ಅವರಿಗೆ ಯಾವುದೇ ಸಹಾಯ ಲಭ್ಯವಾಗಿಲ್ಲ. ಇಂತಹ ಹತಾಶ ಸ್ಥಿತಿಯಲ್ಲಿದ್ದ ರಶ್ಮಿಯಮ್ಮರ ಕುಟುಂಬಕ್ಕೆ ಸಾಂತ್ವನ ಹೇಳಲು ಸಾಮಾಜಿಕ ಕಾರ್ಯಕರ್ತರೊಬ್ಬರು ಆಗಮಿಸಿದ್ದ ವೇಳೆ ರಶ್ಮಿಯಮ್ಮ ಭಾವುಕಳಾಗಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ವೆಂಕಟೇಶ್ವರ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆರೈಕೆ ನೀಡದ ಕಾರಣ ತದನಂತರ ಮತ್ತೊಂದು ಕ್ಲಿನಿಕ್ಗೆ ಕರೆದೊಯ್ಯಲಾಗಿದೆ. ಈ ವೇಳೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ಶೌಚಾಲಯದಲ್ಲಿ ಜೀವನ
ಮಳೆಗೆ ಕೊಚ್ಚಿ ಹೋದ ಬದುಕು, ಶೌಚಾಲಯದಲ್ಲಿ ಜೀವನ ಇದೀಗ ರಶ್ಮಿಯಮ್ಮನ ಮಗಳು ಗೀತಾ ಮತ್ತು ನಾಲ್ವರು ಮಕ್ಕಳು ಹಾಗೀ ಅತ್ತಿಗೆ ಪಳನಿಯಮ್ಮರ ಜೀವನ ಸಾರ್ವಜನಿಕ ಶೌಚಾಲಯದಲ್ಲಿ ನಡೆದಿದೆ. ಗೀತಾಳ ಮಕ್ಕಳು 4 ರಿಂದ 11 ವರ್ಷದೊಳಗಿನವರಾಗಿದ್ದಾರೆ. ಸದ್ಯ ನಾಲ್ಕು ಮನೆಗಳ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನನಗೆ ಯಾವುದೇ ಆಧಾರವಿಲ್ಲ. ನನ್ನ ತಾಯಿ ರಶ್ಮಿಯಮ್ಮ ಕಲ್ಯಾಣ ಮಂಟಪದಲ್ಲಿ ಸ್ವಚ್ಛತಾ ಕೆಲಸ ಮಾಡ್ತಿದ್ದರು. ಆದರೆ ಕೊರೊನಾ ಬಂದ ಬಳಿಕ ಅವರಿಗೆ ಕೆಲಸ ಇಲ್ಲದಾಯಿತು. ಪಾಲಿಕೆ ಒಪ್ಪಿಗೆಯ ಮೇರೆಗೆ ಸಾರ್ವಜನಿಕ ಶೌಚಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸಹಾಯಕ್ಕಾಗಿ ಎಲ್ಲರ ಬಳಿ ಹೋಗಿರುವೆ. ಆದರೆ ಯಾವುದೇ ಸಹಾಯ ದೊರೆತಿಲ್ಲ. ಬೇರೆ ದಾರಿ ಇಲ್ಲದೇ ಇದೀಗ ಸಾರ್ವಜನಿಕ ಶೌಚಾಲಯದಲ್ಲಿ ಜೀವನ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.