ಕರ್ನಾಟಕ

karnataka

ETV Bharat / state

ಅತಿವೃಷ್ಟಿಗೆ ನಲುಗಿದ ಅನ್ನದಾತ: ವರುಣನ ಆರ್ಭಟಕ್ಕೆ ರೈತನ ಬದುಕು ಅತಂತ್ರ..! - Heavy rain in karnataka

ಅತಿಯಾದ ಮಳೆ ಅಥವಾ ಬರಗಾಲ, ಇಲ್ಲವೇ ರೋಗ - ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ಅನ್ನದಾತನು ಸಂಕಷ್ಟಕ್ಕೀಡಾಗುತ್ತಿದ್ದಾನೆ. ಬೆಳೆದ ಬೆಳೆ ಕೈಗೆ ಬರದೇ ಸಾಲಗಾರನಾಗುತ್ತಿದ್ದಾನೆ.

Heavy rain in karnataka
ವರುಣನ ಆರ್ಭಟಕ್ಕೆ ರೈತನ ಬದುಕು ಅತಂತ್ರ

By

Published : Oct 30, 2020, 8:59 PM IST

ಬೆಂಗಳೂರು:‘ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ’ ಎಂಬ ಮಾತಿದೆ. ಇಂದು ನಾವೆಲ್ಲರೂ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ಅನ್ನದಾತ ಇಂದು ಒಂದಲ್ಲಾ ಒಂದು ರೀತಿಯಿಂದ ತೊಂದರೆಗೀಡಾಗುತ್ತಿದ್ದಾನೆ.

ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದರೂ, ಹವಾಮಾನ ವೈಪರೀತ್ಯದಿಂದ ರೋಗ ಬಾಧೆ ಹಾಗೂ ಅತಿಯಾದ ಮಳೆಯಿಂದ ಬೆಳೆಗಳೆಲ್ಲ ನಾಶವಾಗುತ್ತಿವೆ. ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಸಾವಿರಾರು ಮಂದಿ, ಹಳ್ಳಿಗಳಿಗೆ ಹೋಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರಿಂದಾಗಿ ನಿರೀಕ್ಷೆಗಿಂತಲೂ ಹೆಚ್ಚು ಬಿತ್ತನೆಯಾಗಿತ್ತು. ಆದರೆ ಫಲ ಕೊಡುವ ವೇಳೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆಗಳು, ಕೊಯ್ಲು ಸಂದರ್ಭದಲ್ಲಿ ವಿಪರೀತ ಮಳೆಯಿಂದ ಗಿಡದಲ್ಲೇ ಮೊಳಕೆ ಬಂದು ಕೊಳೆತು ಹೋಗಿವೆ. ಈಗ ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನ ಕಾಯಿ, ರಾಗಿ, ಮುಸುಕಿನ ಜೋಳ, ಬಿಳಿ ಜೋಳ ಬೆಳೆಗಳು ಸಹ ಕೊಳೆತು ಹೋಗುತ್ತಿವೆ.

ವರುಣನ ಆರ್ಭಟಕ್ಕೆ ರೈತನ ಬದುಕು ಅತಂತ್ರ

ಇನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯುವ ತೊಗರಿ ಹೂವು ಕಟ್ಟುವ ಸಮಯವಿದು. ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಒಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ತೊಗರಿ ಹಾಳಾಗಿದೆ ಎಂದು ಸರ್ಕಾರ ಅಂದಾಜು ಮಾಡಿದೆ. ಇನ್ನು ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಡಕೆ ಬೆಳೆಗೆ ಹಳದಿ ಎಲೆ ರೋಗದ ಸಮಸ್ಯೆ ಕಾಡುತ್ತಿದೆ. ಕೊಳೆ ರೋಗದಿಂದಾಗಿ ಅಡಕೆ, ಮೆಣಸು, ಕಾಫಿ ಮುಂತಾದ ಬೆಳೆಗಳು ಮರ ಗಿಡಗಳಲ್ಲಿರುವುದಕ್ಕಿಂತ ನೆಲಕ್ಕೆ ಉದುರಿ ಕೊಳೆತು ಹೋಗಿರುವ ಪ್ರಮಾಣವೆ ಹೆಚ್ಚಾಗಿದೆ.

ಇನ್ನು ಈ ಬಾರಿ ಸುರಿದ ಮಾಹಾಮಳೆಗೆ ಸೆಪ್ಟೆಂಬರ್​​ವರೆಗೆ, ಕೃಷಿ ಬೆಳೆ 8.68 ಲಕ್ಷ ಹೆಕ್ಟೇರ್, ತೋಟಗಾರಿಕೆ ಬೆಳೆ 0.88 ಲಕ್ಷ ಹೆಕ್ಟೇರ್, ತೋಟ ಬೆಳೆ 0.51 ಲಕ್ಷ ಹೆಕ್ಟೇರ್ ಸೇರಿದಂತೆ ಒಟ್ಟು 10.51 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ. ಹಾಗೂ ಅಕ್ಟೋಬರ್ ತಿಂಗಳಲ್ಲಿ ಕೃಷಿ ಬೆಳೆ 2, 29, 956 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆ 24,811 ಹೆಕ್ಟೇರ್ ಹಾಳಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಮುಂಗಾರಿನಲ್ಲಿ ದಾಖಲೆ ಪ್ರಮಾಣದ ಬಿತ್ತನೆಯಾಗಿದ್ದರೂ, ಹಿಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಬಿತ್ತನೆ ಕಾರ್ಯ ಕಡಿಮೆಯಾಗಿದೆ. ಈ ಸಾಲಿನ ಹಿಂಗಾರು ಹಂಗಾಮಿನಲ್ಲಿ, 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ ಕಡಲೆ 12.67 ಲಕ್ಷ ಹೆಕ್ಟೇರ್, ಜೋಳ 9.37 ಲಕ್ಷ ಹೆಕ್ಟೇರ್, ಗೋಧಿ 2.25 ಲಕ್ಷ ಹೆಕ್ಟೇರ್, ಸೂರ್ಯಕಾಂತಿ 1.99 ಲಕ್ಷ ಹೆಕ್ಟೇರ್​​​​​ನಲ್ಲಿ ಬೆಳೆಯಲು ಉದ್ದೇಶಿಸಲಾಗಿದೆ.

ಬಿರು ಬಿಸಿಳೂ ಲೆಕ್ಕಿಸದೇ ಕೃಷಿ ಮಾಡಿಕೊಂಡಿದ್ದ ಕಲಬುರಗಿ ರೈತರಿಗೆ ಈ ವರ್ಷ ವರುಣ ಭಾರಿ ಹೊಡೆತ ಕೊಟ್ಟಿದ್ದಾನೆ. ಕಳೆದ ಇಪ್ಪತ್ತು ವರ್ಷಗಳಲ್ಲೆ ಈ ಬಾರಿ ಅತೀ ಹೆಚ್ಚು ಮಳೆ ಸುರಿದಿದ್ದು, ಅನ್ನದಾತನ ಬದುಕನ್ನೇ ಬರಿದಾಗಿಸಿದ್ದಾನೆ. ಅತಿವೃಷ್ಟಿಗೆ ಜಿಲ್ಲೆಯಲ್ಲಿ ಬರೋಬ್ಬರಿ 2.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ ಮುಂದೆ ಇದೆ ಗತಿಯಾದರೇ ಏನು ಎಂಬ ಆತಂಕ ರೈತನಲ್ಲಿ ಕಮ್ಮಿಯಾಗಿಲ್ಲ.

ಸರ್ಕಾರವು ಸರಿಯಾಗಿ ಪರಿಹಾರ ನೀಡಿ, ರೈತನ ಕಣ್ಣೀರನ್ನು ಒರೆಸಬೇಕಿದೆ. ಅಂದಾಗ ಮಾತ್ರ ರೈತ ಬದುಕು ಸ್ವಲ್ಪವಾದರೂ ಹಸನಾಗಲಿದೆ.

ABOUT THE AUTHOR

...view details