ಬೆಂಗಳೂರು: ತೆರವಾಗದೇ ಉಳಿದಿರುವ ದೀಪಾವಳಿ ಹಬ್ಬದ ಕಸ ನಗರದ ರಸ್ತೆಬದಿಗಳಲ್ಲಿ ತುಂಬಿಹೋಗಿವೆ. ಈ ನಡುವೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಪೇಟೆಯ ರಸ್ತೆಗಳು ಕೊಚ್ಚೆಗುಂಡಿಯಂತಾಗಿದ್ದವು.
ಸ್ಥಳೀಯರು ರಸ್ತೆಯಲ್ಲಿ ಓಡಾಡಲು ಆಗದೆ, ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಾಡುತ್ತಿದ್ದವು. ತಡವಾದರೂ ಎಚ್ಚೆತ್ತ ಪಾಲಿಕೆ, ಜೆಸಿಬಿ ಮೂಲಕ ಕಸ ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಿದರು.
ಕೊಚ್ಚೆಗುಂಡಿಯಂತಾದ ರಸ್ತೆಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಚಿಕ್ಕಪೇಟೆ, ನಗರತ್ ಪೇಟೆಗಳಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯೇ ಇಲ್ಲ. ಇನ್ನು ರಸ್ತೆಗಳೂ ಬಹಳ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿವೆ. ಹಬ್ಬದ ಕಸ ತುಂಬಿದ್ದರಿಂದ ಮಳೆ ನೀರು ಹೋಗದೆ ರಸ್ತೆಯಲ್ಲಿ ತುಂಬಿಕೊಂಡಿದೆ. ದೂರು ಬಂದಾಗ ಕ್ರಮಕ್ಕೆ ಸೂಚಿಸಲಾಗಿತ್ತು ಎಂದರು.
8 ನೇ ಮುಖ್ಯರಸ್ತೆಯಲ್ಲಿ 8 ಮನೆಗಳಿಗೆ ನುಗ್ಗಿದ ನೀರು :
ಅಲ್ಲದೆ ನಗರದ ಹೊರವಲಯಗಳಲ್ಲಿ ಮಳೆ ನೀರು ನುಗ್ಗಿದ್ದು, ಕೂಡಲೇ ಪ್ರಹರಿ ವಾಹನಗಳ ಮೂಲಕ ಸಮಸ್ಯೆಗೆ ಸ್ಪಂದಿಸಲಾಗಿದೆ . ಮಳೆಯ ಅವಾಂತರದಿಂದಾಗಿ ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್ನ 8 ನೇ ಮುಖ್ಯರಸ್ತೆಯಲ್ಲಿ 8 ಮನೆಗಳಿಗೆ ನೀರು ನುಗ್ಗಿದೆ. ಕೋಡಿ ಚಿಕ್ಕನಹಳ್ಳಿಯಲ್ಲಿ 3 ಅಂಗಡಿಗಳಿಗೆ ನೀರು ನುಗ್ಗಿದೆ. ಮಹದೇವಪುರ, ಬಸವನಗರದ ಅಪಾರ್ಟ್ಮೆಂಟ್, ರಾಮಮೂರ್ತಿನಗರ ಅಂಡರ್ ಪಾಸ್, ಬಾಲಾಜಿ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಭಾರೀ ಮಳೆಗಾಳಿಯಿಂದಾಗಿ ನಗರದ ಎಂಟು ಕಡೆ ಮರ ಬಿದ್ದಿರುವುದು ವರದಿಯಾಗಿದೆ.