ಬೆಂಗಳೂರು: ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
ಸೆ.11ರಿಂದ 13ರವರೆಗೆ ಅವರು ಮಂಡ್ಯ, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದುದ್ದಕ್ಕೂ ಇವರು ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸಲಿದ್ದು, ಪಕ್ಷದ ಮಹತ್ವಾಕಾಂಕ್ಷಿ ಯೋಜನೆ ಆರೋಗ್ಯ ಹಸ್ತ ಪ್ರಗತಿ ಹಾಗೂ ಕಾಂಗ್ರೆಸ್ ಪಕ್ಷ ಸಂಘಟನೆಯ ಕುರಿತು ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಸೆ.11ರಂದು ಆರಂಭವಾಗುವ ಪ್ರವಾಸ 13ರಂದು ಕೊನೆಗೊಳ್ಳಲಿದ್ದು, ಆರಂಭದಿಂದ ಕೊನೆಯವರೆಗೂ ಇವರು ವಿವಿಧ ಜಿಲ್ಲೆಗಳಲ್ಲಿ ವಿವಿಧ ನಾಯಕರ ಜೊತೆ ಸಮಾಲೋಚಿಸಲಿದ್ದಾರೆ.
ಸೆ.11ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮಂಡ್ಯ ಜಿಲ್ಲೆಗೆ ತೆರಳುವ ಸಲೀಂ ಅಹಮದ್ 10 ಗಂಟೆಗೆ ಮದ್ದೂರಿನಲ್ಲಿ ನಡೆಯುವ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11ಗಂಟೆಗೆ ಮದ್ದೂರಿನಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿರುವ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಮಂಡ್ಯದ ಡಿಸಿಸಿ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸುವರು. ಅಲ್ಲಿಂದ ವಿರಾಜಪೇಟೆಗೆ ತೆರಳಿ ಸಂಜೆ 3ಗಂಟೆಗೆ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಇದಾದ ಬಳಿಕ 4.30ಕ್ಕೆ ಮಡಿಕೇರಿ ಕ್ಷೇತ್ರದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಪಾಲ್ಗೊಂಡು ಸಂಜೆ 5ಕ್ಕೆ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವರು. ಸಂಜೆ 5.30 ಕ್ಕೆ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿರುವ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ರಾತ್ರಿ ಮಡಿಕೇರಿಯಲ್ಲಿ ವಾಸ್ತವ್ಯ ಹೂಡುವರು.
ಸೆ.12 ರಂದು ಬೆಳಿಗ್ಗೆ ಮಡಿಕೇರಿಯಿಂದ ಸುಳ್ಯಕ್ಕೆ ಆಗಮಿಸುವ ಅವರು ಅರಂತೋಡುವಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರಶಸ್ತಿ ಪ್ರಧಾನ ಮಾಡುವರು. ಬೆಳಿಗ್ಗೆ 9ಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ನಂತರ 10.30ಕ್ಕೆ ಸುಳ್ಯ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1ಕ್ಕೆ ಬಂಟ್ವಾಳ ಕ್ಷೇತ್ರದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರುವಾಯ ಮಾಜಿ ಸಚಿವ ರಮಾನಾಥ ರೈ ಮನೆಗೆ ಭೇಟಿ ನೀಡಲಿದ್ದಾರೆ. ಸಂಜೆ 3.30 ಕ್ಕೆ ಬಂಟ್ವಾಳದಿಂದ ಮಂಗಳೂರಿಗೆ ಪ್ರಯಾಣ ಬೆಳೆಸುವವರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಏರ್ಪಡಿಸಿರುವ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4ಕ್ಕೆ ಮಂಗಳೂರಿನ ಡಿಸಿಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆ ಮುಕ್ತಾಯದ ನಂತರ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸೆ.13ರಂದು ಬೆಳಗ್ಗೆ 10.30 ಕ್ಕೆ ಮಂಗಳೂರಿನ ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಸಲೀಂ ಅಹಮದ್ 11ಗಂಟೆಗೆ ಬೈಂದೂರಿನ ಸೆಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ದಿ. ಮಹಮದ್ ಬದ್ರುದ್ದೀನ್ ಅವರ 5ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 12:30 ಕ್ಕೆ ಮಂಗಳೂರಿನಿಂದ ತೆರಳಿ ಕನ್ನಂಗಾರುಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿರುವ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಇಲ್ಲಿಯೇ ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ಅಂದು ಉಡುಪಿಯಲ್ಲಿಯೇ ವಾಸ್ತವ್ಯ ಹೂಡುವ ಅವರು ವಿವಿಧ ಮುಖಂಡರ ಜೊತೆ ಸರಣಿ ಸಭೆ ನಡೆಸಲಿದ್ದಾರೆ. ಸೆ. 14 ರಂದು ಬೆಳಿಗ್ಗೆ 9ಕ್ಕೆ ಉಡುಪಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.