ಬೆಂಗಳೂರು: ಜ್ಯೋತಿಬಾ ಪುಲೆ ಜನ್ಮ ದಿನಾಚರಣೆ ಪ್ರಯುಕ್ತ ಎಲ್ಲಾ ಧರ್ಮದ ಮಹಿಳೆಯರಿಗೆ ಸಾಂಕೇತಿಕವಾಗಿ ಲಸಿಕೆ ನೀಡಿ ಲಸಿಕಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದರು.
ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಲಸಿಕಾ ಉತ್ಸವಕ್ಕೆ ಸಚಿವ ಕೆ. ಸುಧಾಕರ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಏಪ್ರಿಲ್ 11 ಅಂದರೆ ಇಂದು ಜ್ಯೋತಿಬಾಪುಲೆ ಜನ್ಮ ದಿನಾಚರಣೆ ದಿನದಿಂದ ಏಪ್ರಿಲ್ 14 ರ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ್ಯೋತಿಬಾಪುಲೆ ಜನ್ಮ ದಿನಾಚರಣೆಯಾದ ಇಂದು ಮಹಿಳೆಯರಿಗೆ ಲಸಿಕೆ ಪಡೆಯಲು ಅವಕಾಶ ನೀಡಲಾಯಿತು. ಇನ್ನು ಅಂಬೇಡ್ಕರ್ ಜಯಂತಿಯಂದು ಯುವಕರು, ವಿದ್ಯಾವಂತರು, ವಕೀಲರಿಗೆ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಡಾ. ಸುಧಾಕರ್ ಮಾಧ್ಯಮಗಳ ಜೊತೆ ಮಾತನಾಡಿ, 11 ರಿಂದ 14ರ ವರೆಗೆ ಕೊರೊನಾ ಲಸಿಕೆ ಉತ್ಸವ ನೆಡೆಯಲಿದೆ. ಪ್ರಧಾನಿಗಳ ಆಶಯ ಹಾಗೂ ಸಿಎಂ ಸಲಹೆಯಂತೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಕೊರೊನಾ ಕ್ರಮಗಳ ಬಗ್ಗೆ ಪ್ರಧಾನಿಗೆ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಕ್ರೋ ಕಂಟೋನ್ಮೆಂಟ್ ಝೋನ್ ನಲ್ಲಿ ಎಚ್ಚರಿಕೆ ವಹಿಸಲು ಸೂಚನೆ ಕೊಟ್ಟಿದ್ದಾರೆ. ಇನ್ನಷ್ಟು ಗಂಭೀರ ಚಿಂತನೆ ಮಾಡಿ ಹಲವು ಕ್ರಮಗಳನ್ನು ಜಾರಿ ಮಾಡುತ್ತೇವೆ. ಇಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಸಲಹೆ ಪಡೆದಿದ್ದು, ಅದನ್ನು ಜಾರಿಗೊಳಿಸುವುದರ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕದ ಲಸಿಕಾ ಉತ್ಸವಕ್ಕೆ ಇಲ್ಲಿಂದ ಚಾಲನೆ ಸಿಕ್ಕಿದೆ. ಎಲ್ಲಾ ಧರ್ಮದ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತದೆ. ಸಾಮಾಜಿಕ ಸುಧಾರಕರಾದ ಜ್ಯೋತಿಬಾಪುಲೆ ಮಹಿಳಾ ಸಬಲೀಕರಣಕ್ಕೆ ಹೋರಾಟ ಮಾಡಿದ ಮಹಾನುಭಾವರು. ಅವರ ಆಲೋಚನೆಗೆ ಹೆಚ್ಚು ಶಕ್ತಿ ನೀಡಬೇಕು ಎನ್ನುವ ಯೋಚನೆ ನಮ್ಮ ಸರ್ಕಾರದ್ದು. ಎಲ್ಲಾ ಧರ್ಮದ ಮಹಿಳೆಯರಿಗೆ ಸಾಂಕೇತಿಕವಾಗಿ ಲಸಿಕೆ ನೀಡಿ ಚಾಲನೆ ನೀಡಲಾಗಿದೆ ಎಂದರು.
ಪ್ರಧಾನಿ ಕೂಡ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಕ್ರೊ ಕಂಟೈನ್‌ಮೆಂಟ್ ಝೋನ್ ಹೆಚ್ಚು ಮಾಡಬೇಕು ಎಂದು ಪ್ರಧಾನಿ ಸಲಹೆ ಕೊಟ್ಟಿದ್ದಾರೆ. ಇನ್ನಷ್ಟು ಗಂಭೀರ ಯೋಚನೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಧಾನಿ ಕೊಟ್ಟಿರುವ ಸೂಚನೆ ಪಾಲನೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೇವೆ. ಎರಡನೇ ಅಲೆ ಮಣಿಸುವಂತಹ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಕೋವಿಡ್ ತಡೆಗೆ ನಿರ್ದಿಷ್ಟ ಕ್ರಮ ಕೈಗೊಳ್ಳಲು ತಾಂತ್ರಿಕ ಸಮಿತಿ ಸೂಚನೆ ನೀಡಿದೆ: ಸಚಿವ ಸುಧಾಕರ್
ನಿನ್ನೆ ರಾತ್ರಿಯ ಸಿಟಿ ರೌಂಡ್ಸ್ ಬಗೆಗಿನ ಪ್ರೆಶ್ನೆಗಳಿಗೆ ಪ್ರತಿಕ್ರಿಯಿಸಿ, ರಾತ್ರಿ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಪರಿಶೀಲಿಸಬೇಕೆಂದು ಹೋಗಿದ್ದೆ. 108 ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಸೂಚಿಸಿದ್ದೇನೆ ಎಂದರು.
ಜನರು ಜಾಗೃತರಾದರೆ ಯಾವುದೇ ಲಾಕ್ಡೌನ್ ಅಗತ್ಯ ಬೀಳುವುದಿಲ್ಲ. ಸಾರ್ವಜನಿಕರ ಮೇಲೆ ಜವಾಬ್ದಾರಿ ಇದೆ. ಕೊರೊನಾ ನಿಯಂತ್ರಣವನ್ನು ಜನರೇ ಮಾಡಿದರೆ ನಾವು ಇನ್ನಷ್ಟು ಸಬಲವಾಗಿರುತ್ತೇವೆ. ಕೋವಿಡ್ ಸೈಕಲ್ ಮುರಿಯಲು ಹಲವು ದೇಶದಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ 3 ದಿನ ಲಾಕ್ ಡೌನ್ ಮಾಡಿದ್ದಾರೆ. ಅಂತಹ ಪರಿಸ್ಥಿತಿ ನಮಗೆ ಬರೋದು ಬೇಡ ಅಂದರೆ ಜನರು ಸಹಕಾರ ನೀಡಬೇಕು, ಬದುಕು ಕಟ್ಟಿಕೊಳ್ಳುವ ಆರ್ಥಿಕ ಚಟುವಟಿಕೆ ಮುಂದುವರೆಯಬೇಕು ಅಂದರೆ ಜನರು ಕೊರೊನಾ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.