ಬೆಂಗಳೂರು:ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಯಾರೂ ಯಾರಿಗೂ ಕೇಳಿಲ್ಲ. ಸಿ ಎಂ ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಕುರಿತು ನಾವ್ಯಾರು ಏನೂ ಕೇಳಿಲ್ಲ, ಯಾಕೆ ಸುಮ್ನೆ ಇವೆಲ್ಲ ಹೇಳ್ತಾರೋ ಗೊತ್ತಿಲ್ಲ, ಹೆಚ್ ಡಿ ಕುಮಾರಸ್ವಾಮಿಯವರೇ ಶಾಸಕಾಂಗ ಪಕ್ಷದ ನಾಯಕರಾಗಿರುತ್ತಾರೆ. ಸಿಎಂ ಇಬ್ರಾಹಿಂ ಸಾಹೇಬ್ರೆ ಅಧ್ಯಕ್ಷರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ಆಕಾಂಕ್ಷಿ ಅಲ್ಲ, ಯುವ ಅಧ್ಯಕ್ಷ ಹುದ್ದೆಯನ್ನೂ ಕೇಳಿಲ್ಲ, ಅದೆಲ್ಲ ಯಾರು ಹೇಳ್ತಾರೋ ಗೊತ್ತಿಲ್ಲ. ನಾಳೆ ಪಕ್ಷದ ಸಭೆ ಇದ್ದು ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯಲಾಗುತ್ತದೆ ಹೆಚ್.ಡಿ ರೇವಣ್ಣ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಪುನರಾಯ್ಕೆಯಾದ ಹೆಚ್ ಡಿ ಕುಮಾರಸ್ವಾಮಿ:ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್. ಡಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಶಾಸಕರೆಲ್ಲಾ ಒಮ್ಮತದಿಂದ ಆಯ್ಕೆ ಮಾಡಿದರು. ನೂತನವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾಧ್ಯಮಗೋಷ್ಟಿ ನಡೆಸಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.