ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೇಳೆ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೊನಾ ವಾರಿಯರ್‌ಗಳು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.
ಜೀವ ತೆತ್ತ ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ಪರಿಹಾರ ನೀಡದಿದ್ದರೆ ಇತಿಹಾಸ ನಿಮ್ಮನ್ನ ಕ್ಷಮಿಸಲ್ಲ: ಹೆಚ್ ಡಿಕೆ - ರಾಜ್ಯಸರ್ಕಾರದ ವಿರುದ್ಧ ಟ್ವಿಟರ್ನಲ್ಲಿ ಹೆಚ್ಡಿಕೆ ಆಕ್ರೋಶ
ಕೊರೊನಾ ವಾರಿಯರ್‌ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನಾ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು, ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೊನಾ ವಾರಿಯರ್‌ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನಾ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು?. ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು 'ವಿದ್ಯಾಗಮ' ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿ ಸರ್ಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರ್ಕಾರದಿಂದ ಕೊರೊನಾ ವಾರಿಯರ್‌ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
90 ವೈದ್ಯರು, 20 ನರ್ಸ್‌ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು- ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇನ್ನು ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕೊರೊನಾ ವಾರಿಯರ್‌ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠ ಪಕ್ಷ ಕೊರೊನಾ ವಾರಿಯರ್‌ಗಳ ಸುರಕ್ಷತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು, ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ, ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.