ಬೆಂಗಳೂರು :ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಸರಕಾರಿ ನೇಮಕಾತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತೇವೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಸರಿಯಾದ ಚಿಕಿತ್ಸೆ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೀಸಲಾತಿ ಎಂದು ಬಿಜೆಪಿ ಸರಕಾರ ಜನರನ್ನು ಯಾಮಾರಿಸುತ್ತಿದೆ. ಆದರೆ, ಸರಕಾರಿ ಹುದ್ದೆಗಳನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ಮಾರಿಕೊಳ್ಳುತ್ತಿದೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ಈ ನೇಮಕಾತಿ ವ್ಯವಸ್ಥೆಯನ್ನು ಸರಿ ಮಾಡುತ್ತೇನೆ. ನೇಮಕಾತಿ ಮಾಡುವ ಸಂಸ್ಥೆಗಳಿಗೆ ತಕ್ಕ ಶಾಸ್ತಿ ಮಾಡಿ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆಯನ್ನು ಗಮನಿಸಿದ್ದೇನೆ. ರಾಜ್ಯ ಸರಕಾರ ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಶೀಲನೆ ಮಾಡಬೇಕು. ಹಾಗೆ ನೋಡಿದರೆ ಇದಕ್ಕೆ ಸರ್ಕಾರವೇ ಕಾರಣ ಎಂದರು.
ಮೀಸಲು ವಿಷಯದಲ್ಲಿ ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿರುವ ಮಾರ್ಗಸೂಚಿಯಂತೆ ಮೀಸಲಾತಿ ಇರಬೇಕು. ಸಮಾಜ ಹಾಳು ಮಾಡುವ, ಜಾತಿಗಳ ಮಧ್ಯೆ ತಂದಿಡುವ ಕೆಲಸ ಆಗಬಾರದು. ಹತ್ತು ಜಿಲ್ಲೆಯಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರು ಇದ್ದಾರೆ. ಹೀಗಿದ್ದರೂ ಯಾವುದೇ ಮುಂದಾಲೋಚನೆ ಇಲ್ಲದೆ, ಬೇಜವಾಬ್ದಾರಿಯಿಂದ ಆದೇಶ ಹೊರಡಿಸಿದ್ದು ಯಾಕೆ? ಕೇವಲ ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಮಾಡಿದೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜವನ್ನು ಒಡೆಯಬೇಕು ಎನ್ನುವ ದುರುದ್ದೇಶದಿಂದಲೇ ಬಿಜೆಪಿ ಸರಕಾರ ಮೀಸಲು ನಾಟಕ ಅಡಿದೆ. ಮುಸ್ಲಿಮರು ಗಲಾಟೆಗೆ ಮುಂದಾಗಲಿ, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಈ ಸರ್ಕಾರದ ದುರುದ್ದೇಶವಾಗಿತ್ತು. ಒಂದು ವೇಳೆ ಮುಸ್ಲಿಮರು ಬೀದಿಗಿಳಿದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ಅಮಾಯಕ ಜನ ಬಲಿಯಾಗಿದ್ದರೆ ಯಾರು ಹೊಣೆ ಆಗುತ್ತಿದ್ದರು? ರಕ್ತಪಾತ ಮಾಡಲು ಬಿಜೆಪಿಯವರು ಕುತಂತ್ರ ಹೂಡಿದ್ದಾರೆ. ಸಂಘರ್ಷ ಆಗಬೇಕು ಅಷ್ಟೆ ಅವರಿಗೆ. ಆದರೆ, ಮುಸ್ಲಿಮರು ತಾಳ್ಮೆ ಇರಲಿ. ಹುಡುಗಾಟಿಕೆಯಿಂದ ಮಾಡಿರುವ ಈ ಮೀಸಲಾತಿಗೆ ಬೆಂಬಲ ಇಲ್ಲ ಎಂದು ಹೇಳಿದರು.