ಬೆಂಗಳೂರು:ನಾಳೆ ಅಥವಾ ಗುರುವಾರ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆಯಾಗಿಲ್ಲ ಎಂದರು.
ನನಗಿಂತ ಹೆಚ್ಚು ಮಾಧ್ಯಮಗಳಿಗೆ ಹಾಸನ ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ. ಅದನ್ನು ಬಿಟ್ಟು ಟಿಕೆಟ್ ಘೋಷಣೆ ಮಾಡಿದರೆ ಇನ್ಯಾವುದೋ ಕಥೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಆ ಪಟ್ಟಿಯಲ್ಲಿ ಹಾಸನದ್ದೂ ಒಳಗೊಂಡಂತೆ ತೀರ್ಮಾನ ಮಾಡಬೇಕು ಎಂಬ ಲೆಕ್ಕಾಚಾರವಿದೆ. ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ನಾಳೆ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರ ಸಿಕ್ಕಿದೆ. ಇದರಿಂದಾಗಿ ರಾಜ್ಯದಲ್ಲಿ ಶೇ. 2-3 ರಷ್ಟು ನಮ್ಮ ಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟಲು ಯಾವುದೇ ದುಡುಕಿ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಜೆಡಿಎಸ್ ಪಟ್ಟಿ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‌ಡಿಕೆ, ಅದರ ಬಗ್ಗೆ ನಾನು ಚಿಂತಿಸಿಲ್ಲ. ಕೆಲವು ಭಾಗಗಳಲ್ಲಿ ನಾವು ವೀಕ್ ಇದ್ದೇವೆ. ಉತ್ತರ ಕರ್ನಾಟಕದಲ್ಲಿ ಮತ ಹಾಕಲು ಜನ ಸಿದ್ದರಿದ್ದಾರೆ. ಆದರೆ ಮತಗಳಾಗಿ ಪರಿವರ್ತನೆ ಮಾಡುವ ಅಭ್ಯರ್ಥಿಗಳ ಕೊರತೆ ಇದೆ. ಮತವಾಗಿ ಪರಿವರ್ತನೆ ಮಾಡುವ ನಾಯಕರು ಬಂದಾಗ ಆ ಬಗ್ಗೆ ಚಿಂತನೆ ಮಾಡುತ್ತೇವೆ.